ದೇವರು-ಧರ್ಮದ ಹೆಸರಲ್ಲಿ ಒಡೆಯುವ ಬಿಜೆಪಿಯನ್ನು ದೂರವಿಡಿ: ಸಿಎಂ ಸಿದ್ದರಾಮಯ್ಯ

Update: 2024-10-13 17:27 GMT

ಬೆಳಗಾವಿ: ‘ದೇವರು-ಧರ್ಮದ ಹೆಸರಲ್ಲಿ ದೇಶ ಮತ್ತು ರಾಜ್ಯವನ್ನು ಒಡೆಯುವ ಬಿಜೆಪಿಯನ್ನು ಮೊದಲು ದೂರ ಇಡಿ. ಇಲ್ಲದಿದ್ದರೆ ನಮ್ಮ ನಾಡೂ ಉಳಿಯಲ್ಲ, ದೇಶವೂ ಉಳಿಯವುದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ರವಿವಾರ ಜಿಲ್ಲೆಯ ಸವದತ್ತಿ ವಿಧಾನಸಭಾ ಕ್ಷೇತ್ರದಲ್ಲಿ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮನ ಗುಡ್ಡದಲ್ಲಿ, ಮಹಿಳಾ ಅಭಿವೃದ್ಧಿ ನಿಗಮದಿಂದ ನಿರ್ಮಿಸಲಾಗಿರುವ ವಾಣಿಜ್ಯ ಸಂಕೀರ್ಣ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಮುಂದಿನ ವರ್ಷದ ವೇಳೆಗೆ ಆರೇಳು ಸಾವಿರ ಭಕ್ತರು ಉಳಿಯಲು ಯಲ್ಲಮ್ಮ ಸನ್ನಿಧಿಯಲ್ಲಿ ವ್ಯವಸ್ಥೆ ರೂಪಿಸುತ್ತೇವೆ ಎಂದು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

‘ಶಕ್ತಿ ಯೋಜನೆ’ಯಿಂದಾಗಿ ಇದುವರೆಗೂ ರಾಜ್ಯದಲ್ಲಿ ಮಹಿಳೆಯರು 300 ಕೋಟಿ ಉಚಿತ ಟ್ರಿಪ್ ಮಾಡಿದ್ದಾರೆ. ಇವರಲ್ಲಿ ಲಕ್ಷಾಂತರ ಮಂದಿ ತಾಯಿ ರೇಣುಕಾ ಯಲ್ಲಮ್ಮನ ದರ್ಶನವನ್ನು ಪಡೆದಿದ್ದಾರೆ. ದೇವರು-ಧರ್ಮ ತಮಗೆ ಮಾತ್ರ ಸೇರಿದ್ದು ಬಿಜೆಪಿಯವರು ಭಯಂಕರ ಮಾತಾಡ್ತಾರಲ್ಲಾ, ಆದರೆ ಇದುವರೆಗೂ ದೇವಿಯ ಭಕ್ತರಿಗೆ ನಾವು ಮಾಡಿದಂತಹ ಕಾರ್ಯಕ್ರಮವನ್ನು ಬಿಜೆಪಿಯವರು ಏಕೆ ಮಾಡಲಿಲ್ಲ’ ಎಂದು ಪ್ರಶ್ನಿಸಿದರು.

ತಾಯಿ ಯಲ್ಲಮ್ಮ ಶಕ್ತಿ ದೇವತೆ. ಯಾವ ದೇವರೂ ಮನುಷ್ಯರನ್ನು ಧರ್ಮದ ಕಾರಣಕ್ಕೆ ದ್ವೇಷಿಸಿ ಎಂದು ಹೇಳುವುದಿಲ್ಲ. ದೇವರ ಹೆಸರಲ್ಲಿ ದ್ವೇಷ ಹೇಳುವುದು ಬಿಜೆಪಿ ಮಾತ್ರ. ತಾಯಿ ರೇಣುಕಾ ಯಲ್ಲಮ್ಮ ದೇವರು, ಧರ್ಮದ ಹೆಸರಲ್ಲಿ ಮನುಷ್ಯರನ್ನು ದ್ವೇಷಿಸಿ ಎಂದು ಎಲ್ಲೂ ಹೇಳಿಲ್ಲ ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.

ಗೃಹಲಕ್ಷ್ಮಿ ಯೋಜನೆ ಜಾರಿಯಾದರೆ ಅತ್ತೆ-ಸೊಸೆ ಜಗಳ ಆಗ್ತದೆ ಎಂದು ಬಿಜೆಪಿಯವರು ಬೊಬ್ಬೆ ಹೊಡೆದರು. ಆದರೆ ಗೃಹಲಕ್ಷ್ಮಿ ಹಣವನ್ನು ಕೂಡಿಸಿಟ್ಟು ಅತ್ತೆಯರು ಸೊಸೆಯರಿಗೆ ಬಳೆ ಅಂಗಡಿ ಹಾಕಿಕೊಟ್ಟಿದ್ದಾರೆ. ಟೈಲರಿಂಗ್ ಮೆಷಿನ್ ಕೊಡಿಸಿದ್ದಾರೆ. ಇಂತಹವು ನೂರಾರು ಉದಾಹರಣೆಗಳಿವೆ ಎಂದು ಅವರು ನುಡಿದರು.

ತಾಯಿ ರೇಣುಕಾ ಯಲ್ಲಮ್ಮ ಕ್ಷೇತ್ರದ ಅಭಿವೃದ್ಧಿಗೆ ನಾವು ರೆಡಿ. ನಿಮ್ಮ ಸಹಕಾರ ಅಗತ್ಯ. ಕ್ಷೇತ್ರದಲ್ಲಿ ಅನಧಿಕೃತವಾಗಿ ಮಳಿಗೆಗಳನ್ನು ಯಾವುದೇ ಕಾರಣಕ್ಕೂ ಹಾಕಬೇಡಿ. ಅನಧಿಕೃತವಾಗಿ ಇರುವವರಿಗೆ ಬೇರೆ ವ್ಯವಸ್ಥೆ ಮಾಡೋಣ. ಆದರೆ ಅಕ್ರಮವಾಗಿ ಯಾರೂ ಮಳಿಗೆ ಹಾಕದೆ ಸಹಕರಿಸಿ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ಶಾಸಕ ವಿಶ್ವಾಸ್ ವೈದ್ಯ ವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News