2026ರ ವೇಳೆಗೆ ಮಂಗನಕಾಯಿಲೆಗೆ ಲಸಿಕೆ ಲಭ್ಯ : ಸಚಿವ ದಿನೇಶ್ ಗುಂಡೂರಾವ್

Update: 2024-10-16 14:52 GMT

ಬೆಂಗಳೂರು : ಕಾಲಮಿತಿಯೊಳಗೆ ಮಂಗನಕಾಯಿಲೆ (ಕೆಎಫ್‍ಡಿ) ತಡೆಗೆ ಲಸಿಕೆ ಲಭ್ಯತೆ ಅಗತ್ಯವಾಗಿದ್ದು, 2026ರ ವೇಳೆಗೆ ಲಸಿಕೆ ಲಭ್ಯವಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬುಧವಾರ ಮಂಗನ ಕಾಯಿಲೆಗೆ ಅಥವಾ ಕ್ಯಾಸನೂರು ಅರಣ್ಯ ರೋಗಕ್ಕೆ(ಕೆಎಫ್‍ಡಿ) ಲಸಿಕೆ ಕುರಿತಂತೆ ದಿಲ್ಲಿಯಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ನಿರ್ದೇಶಕರನ್ನು ಭೇಟಿ ಮಾಡಿ ಪ್ರಕಟನೆ ಹೊರಡಿಸಿರುವ ಅವರು, ಮೊದಲ ಹಂತದ ಪ್ರಯೋಗದಲ್ಲಿ ಕೆ.ಎಫ್.ಡಿ ಲಸಿಕೆ ಭರವಸೆ ಮೂಡಿಸಿದ್ದು, ಲಸಿಕೆಯ ಎರಡನೆ ಹಂತವನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು ಎಂದರು.

2025ರ ಎಪ್ರಿಲ್ ತಿಂಗಳಿನಲ್ಲಿ ಲಸಿಕೆಯ ಮಾನವ ಪ್ರಯೋಗಗಳನ್ನು ನಡೆಸಲು ಯೋಜಿಸಲಾಗಿದೆ. 2026ರ ವೇಳೆಗೆ ಲಸಿಕೆ ಲಭ್ಯವಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಕೆಎಫ್.ಡಿ ಲಸಿಕೆ ದೊರಕಿಸಿಕೊಡಲು ಅಗತ್ಯ ವೀತ್ತಿಯ ನೆರವು ಒದಗಿಸುವಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯನ್ನು ಕೇಳಲಾಗಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದ ಅನೀಮಿಯಾ ಮುಕ್ತ ಪೌಷ್ಠಿಕ ಕರ್ನಾಟಕ ಯೋಜನೆಗೆ ಮಂಡಳಿಯ ನಿರ್ದೇಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ವಿಶೇಷವಾಗಿ ಸರಕಾರಿ ಶಾಲಾ-ಕಾಲೇಜು ಮಕ್ಕಳನ್ನು ರಕ್ತಹೀನತೆ ತಪಾಸಣೆಗೆ ಒಳಪಡಿಸುತ್ತಿರುವುದು ಉತ್ತಮ ಯೋಜನೆ ಎಂದಿದ್ದಾರೆ. ಅಲ್ಲದೇ ಕೇಂದ್ರದ ರಕ್ತ ಹೀನತೆ ಮುಕ್ತ ಭಾರತ್ 2.0 ಯೋಜನೆಗೆ ಅನುಗುಣವಾಗಿ ಯೋಜನೆ ವಿಸ್ತರಿಸುವಂತೆ ಮಂಡಳಿಯ ನಿರ್ದೇಶಕರು ರಾಜ್ಯ ಸರಕಾರವನ್ನು ಒತ್ತಾಯಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

ರಾಜ್ಯದಲ್ಲಿ ಡೆಂಗಿ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಕೈಗೊಂಡಿರುವ ನವೀನ ತಂತ್ರಜ್ಞಾನಗಳ ಬಗ್ಗೆ ಆಸಕ್ತಿ ತೋರಿದ ಐಸಿಎಂಆರ್ ನಿರ್ದೇಶಕರು, ರಾಜ್ಯ ಸರಕಾರ ತೆಗೆದುಕೊಂಡಿರುವ ಕ್ರಮಗಳನ್ನು ಇತರ ರಾಜ್ಯಗಳಲ್ಲಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಸಾರ್ವಜನಿಕ ಆರೋಗ್ಯ ಸಂಶೋಧನೆಯಲ್ಲಿ ವಿಶೇಷ ಯೋಜನೆಗಳನ್ನು ಕೈಗೊಳ್ಳುಲು ಪರಸ್ಪರ ಸಹಕರಿಸುವ ನಿಟ್ಟಿನಲ್ಲಿ ಭೇಟಿ ವೇಳೆ ಚರ್ಚೆ ನಡೆಸಲಾಯಿತು ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News