ಒಳ ಮೀಸಲಾತಿ | ಸಂಪುಟ ಸಭೆಯಲ್ಲಿ ಚರ್ಚಿಸುವುದಾಗಿ ಮುಖ್ಯಮಂತ್ರಿ ಭರವಸೆ : ಕೆ.ಎಚ್.ಮುನಿಯಪ್ಪ
ಬೆಂಗಳೂರು: ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ಜಾರಿ ಮಾಡುವ ಸಂಬಂಧ ಮುಂದಿನ ಸಂಪುಟ ಸಭೆಯಲ್ಲಿ ಚರ್ಚೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ಶನಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ಒಳ ಮೀಸಲಾತಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್‍ನ ಆದೇಶದಂತೆ ಒಳಮೀಸಲಾತಿ ಜಾರಿಗೊಳಿಸುವ ಸಂಬಂಧ ನಮ್ಮ ಸಮುದಾಯದ ಎಲ್ಲ ಸಚಿವರು, ಶಾಸಕರು, ಮಾಜಿ ಸಚಿವರು, ಸಂಸದರೊಂದಿಗೆ ಸಭೆ ನಡೆಸಲಾಯಿತು ಎಂದರು.
ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರದ ಕುರಿತು ಕೂಲಂಕಷವಾಗಿ ಚರ್ಚೆ ನಡೆಸಿ, ನಮ್ಮ ಹೈಕಮಾಂಡ್‍ನ ಒಪ್ಪಿಗೆ ಪಡೆದು ಒಳ ಮೀಸಲಾತಿ ಜಾರಿಗೊಳಿಸಲು ಬದ್ಧವಾಗಿರುವುದಾಗಿ ಮುಖ್ಯಮಂತ್ರಿ ನಮಗೆ ಭರವಸೆ ನೀಡಿದ್ದಾರೆ. ಒಳ ಮೀಸಲಾತಿ ಜಾರಿಯಾಗುವವರೆಗೆ ಯಾವುದೆ ನೇಮಕಾತಿಗಳು ಆಗಲು ಅವಕಾಶ ನೀಡಬಾರದು ಎಂದು ನಾವು ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ ಎಂದು ಅವರು ತಿಳಿಸಿದರು.
ನಮ್ಮ ಮನವಿಗೆ ಮುಖ್ಯಮಂತ್ರಿ ಪೂರಕವಾಗಿ ಸ್ಪಂದಿಸಿದ್ದಾರೆ. ಅದೇ ರೀತಿ, ಜಾತಿ ಜನಗಣತಿ ವರದಿಯನ್ನು ಜಾರಿ ಮಾಡುವ ನಿಟ್ಟಿನಲ್ಲಿ, ಅದನ್ನು ಸಚಿವ ಸಂಪುಟ ಸಭೆಯ ಮುಂದೆ ತಂದು ಚರ್ಚೆ ನಡೆಸಬೇಕು. ಎಲ್ಲ ಸಮುದಾಯಗಳ ವಿಶ್ವಾಸವನ್ನು ಪಡೆದು ಅದನ್ನು ಜಾರಿಗೆ ತರುವಂತೆಯೂ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ ಎಂದು ಮುನಿಯಪ್ಪ ಹೇಳಿದರು.
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಮಾದಿಗ ಸಮುದಾಯವು ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿದೆ. ನಮಗೆ ಮೀಸಲಾತಿ ಸಿಕ್ಕಿಲ್ಲ. ನಮಗೆ ನ್ಯಾಯ ಕೊಡಿಸಲು ಸರಕಾರ ಸಮಿತಿಯನ್ನು ರಚನೆ ಮಾಡಿತ್ತು ಎಂದು ಹೇಳಿದರು.
ಒಳ ಮೀಸಲಾತಿಯನ್ನು ರಾಜ್ಯ ಸರಕಾರವೇ ಜಾರಿ ಮಾಡಬಹುದು ಎಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಈ ವಿಚಾರದ ಬಗ್ಗೆ ಇಂದು ಮುಖ್ಯಮಂತ್ರಿ ಜೊತೆ ಸಭೆ ಮಾಡಿದ್ದೇವೆ. ಅವರು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರವನ್ನು ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ ಎಂದು ಆಂಜನೇಯ ಹೇಳಿದರು.
ಸದ್ಯ ರಾಜ್ಯದಲ್ಲಿ ಉಪ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಅದನ್ನು ನೋಡಿಕೊಂಡು ಮುಂದುವರೆಯುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಒಳ ಮೀಸಲಾತಿ ಕುರಿತು ಸರಕಾರ ಸದಾಶಿವ ಆಯೋಗವನ್ನು ನೇಮಿಸಿತ್ತು. ನಮಗೆ ಒಳ ಮೀಸಲಾತಿ ಬೇಕು ಎಂದು 30 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ನಮಗೆ ನಮ್ಮ ಹಕ್ಕು ಕೊಡಲಿ ಎಂದು ಅವರು ಮನವಿ ಮಾಡಿದರು.
ಸಭೆಯಲ್ಲಿ ಸಚಿವ ಆರ್.ಬಿ.ತಿಮ್ಮಾಪುರ್, ರಾಜ್ಯಸಭೆಯ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ, ಪರಿಷತ್ ಸದಸ್ಯ ಡಾ.ತಿಮ್ಮಯ್ಯ, ಶಾಸಕರಾದ ಬಸಂತಪ್ಪ, ಶ್ರೀನಿವಾಸ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮುಖಂಡ ಶಿವಣ್ಣ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.