ಸಂತ್ರಸ್ತೆಯ ಅಪಹರಣ ಪ್ರಕರಣ | ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ತೀರ್ಪು ಕಾಯ್ದಿರಿಸಿದ ಕೋರ್ಟ್
ಬೆಂಗಳೂರು : ಮೈಸೂರಿನ ಕೆ.ಆರ್.ನಗರದ ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಭವಾನಿ ರೇವಣ್ಣ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಲಾಗಿದೆ.
ಭವಾನಿ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯವು ವಾದ ಪ್ರತಿವಾದ ಆಲಿಸಿ ಮೇ.31ಕ್ಕೆ ತೀರ್ಪು ನೀಡುವುದಾಗಿ ತಿಳಿಸಿದೆ. ವಿಚಾರಣೆ ವೇಳೆ ನ್ಯಾಯಾಧೀಶರು ಭವಾನಿ ರೇವಣ್ಣಅವರನ್ನು ಆರೋಪಿಯನ್ನಾಗಿ ಮಾಡಲಾಗಿದೆಯೇ ಎಂದು ಎಸ್ಐಟಿಗೆ ಪ್ರಶ್ನಿಸಿತು. ಈ ವೇಳೆ ಎಸ್ಐಟಿ ಪರ ವಕೀಲರು ಪ್ರಕರಣದಲ್ಲಿ ಭವಾನಿ ಪಾತ್ರವಿರುವುದು ಕಂಡು ಬಂದಿದೆ. ಈವರೆಗೆ ಸೇರಿಸಿಲ್ಲ. ಆದರೆ ಪ್ರಕರಣದ ತನಿಖೆ, ಸಂಗ್ರಹಿಸಿರುವ ಸಾಕ್ಷ್ಯ ಗಮನಿಸಿದರೆ ಆರೋಪಿಯಾಗಿಸಬಹುದು ಎಂದು ಎಸ್ಐಟಿ ಪರ ಎಸ್.ಪಿ.ಪಿ ಬಿಎನ್ ಜಗದೀಶ್ ಹೇಳಿದ್ದಾರೆ.
ಈ ವೇಳೆ ಪ್ರತಿವಾದ ಮಂಡಿಸಿದ ಭವಾನಿ ಪರ ವಕೀಲರು, ರಾಜಕೀಯ ದ್ವೇಷದಿಂದ ತನಿಖೆ ನಡೆಸಲಾಗುತ್ತಿದೆ. ಕುಟುಂಬದ ಎಲ್ಲರನ್ನೂ ಆರೋಪಿಯಾಗಿಸಲು ಯತ್ನಿಸಲಾಗಿದೆ. ರಾಜಕೀಯ ವಿರೋಧಿಗಳನ್ನು ಮುಗಿಸಲು ಯತ್ನಿಸಲಾಗುತ್ತಿದೆ ಎಂದು ಕೋರ್ಟ್ ಗಮನಕ್ಕೆ ತಂದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಮೇ.31ಕ್ಕೆ ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ.