ಮಹಿಳೆಯ ಅಪಹರಣ ಪ್ರಕರಣ | ಎಚ್.ಡಿ.ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ
ಬೆಂಗಳೂರು : ಮೈಸೂರಿನ ಕೆ.ಆರ್.ನಗರದ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಬಂಧನವಾಗಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ ಆಗಿದೆ.
ಹೊಳೆನರಸೀಪುರ ಶಾಸಕ ಎಚ್.ಡಿ.ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ನ್ಯಾಯಾಧೀಶರು, ಸುದೀರ್ಘವಾದ ವಾದ ಪ್ರತಿವಾದ ಆಲಿಸಿ ಹೆಚ್ಚಿನ ವಿಚಾರಣೆಗಾಗಿ ಮೇ.13 ಕ್ಕೆ ಮುಂದೂಡಿದೆ. ಇದರಿಂದ ಜಾಮೀನು ಸಿಗುವ ನಂಬಿಕೆಯಲ್ಲಿದ್ದ ಮಾಜಿ ಸಚಿವ ರೇವಣ್ಣಗೆ ಬಾರಿ ನಿರಾಸೆಯಾಗಿದೆ. ಅಲ್ಲದೆ ಮುಂದಿನ ವಾರದವರೆಗೆ ರೇವಣ್ಣ ಜೈಲಿನಲ್ಲಿ ಕಳೆಯಬೇಕಿದೆ.
ಒತ್ತಡ ಹಾಕಿ ದೂರು : ಪ್ರಜ್ವಲ್ ವಿರುದ್ಧ ಸುಳ್ಳು ದೂರು ನೀಡಲು ಮಹಿಳೆ ಮೇಲೆ ಒತ್ತಡ ಹಾಕಲಾಗಿದೆ ಎನ್ನಲಾಗಿದ್ದು, ಈ ಸಂಬಂಧ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಸಂತ್ರಸ್ತೆ ದೂರು ನೀಡಿರುವುದಾಗಿ ಸ್ಫೋಟಕ ಮಾಹಿತಿ ಗೊತ್ತಾಗಿದೆ.
ಪೊಲೀಸರೆಂದು ಹೇಳಿಕೊಂಡು ಬಂದಿರುವ ಮೂವರು ಸಂತ್ರಸ್ತೆಗೆ ಬೆದರಿಕೆ ಹಾಕಿರುವ ಆರೋಪವೊಂದು ಕೇಳಿಬಂದಿದೆ. ಈ ಸಂಬಂಧ ರಾಷ್ಟ್ರೀಯ ಮಹಿಳಾ ಆಯೋಗ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದು, ಇದರಲ್ಲಿ ಬೆದರಿಕೆ ಹಾಕಿರುವ ಬಗ್ಗೆ ಸಂತ್ರಸ್ತೆ ಆಯೋಗಕ್ಕೆ ದೂರು ನೀಡಿದ್ದಾರೆ ಎಂದು ತಿಳಿಸಲಾಗಿದೆ. ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೊ ಪ್ರಕರಣದ ಬಗ್ಗೆ ಕರ್ನಾಟಕ ಡಿಜಿಪಿಗೆ ಪತ್ರ ಬರೆದಿದ್ದು, ಘಟನೆಯನ್ನು ತೀವ್ರವಾಗಿ ಖಂಡಿಸಿದೆ. ಜತೆಗೆ, ಈಗಾಗಲೇ ತೆಗೆದುಕೊಂಡ ಕ್ರಮಗಳ ವಿವರವಾದ ವರದಿಯನ್ನು ಮೂರು ದಿನಗಳಲ್ಲಿ ಆಯೋಗಕ್ಕೆ ಸಲ್ಲಿಸಬೇಕು ಪತ್ರದಲ್ಲಿ ಉಲ್ಲೇಖಿಸಿದೆ.