ಕೊಡಗು: ತಲಕಾವೇರಿಯಲ್ಲಿ ಗಾಜಿನ ಸೇತುವೆ ನಿರ್ಮಾಣಕ್ಕೆ ವಿರೋಧ

Update: 2023-09-26 12:32 GMT
ಗಾಜಿನ ಸೇತುವೆ - ಸಾಂದರ್ಭಿಕ ಚಿತ್ರ

ಮಡಿಕೇರಿ ಸೆ.26 : ಭಾಗಮಂಡಲ ಗ್ರಾ.ಪಂ ವ್ಯಾಪ್ತಿಯ ತಲಕಾವೇರಿಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಗಾಜಿನ ಸೇತುವೆ ನಿರ್ಮಿಸುವ ಯೋಜನೆಯನ್ನು ರೂಪಿಸಿರುವುದಕ್ಕೆ ಕೊಡಗು ಏಕೀಕರಣ ರಂಗ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಗ್ಲಾಸ್ ಬ್ರಿಡ್ಜ್ ನಿರ್ಮಿಸಲು ನೀಡಿರುವ ಅನುಮತಿಯನ್ನು ರದ್ದುಪಡಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೆÇನ್ನಣ್ಣ ಹಾಗೂ ಜಿಲ್ಲಾಧಿಕಾರಿ ವೆಂಕಟರಾಜ ಅವರಿಗೆ ಏಕೀಕರಣ ರಂಗದ ಪ್ರಮುಖ ಎ.ಎ.ಪೂವಯ್ಯ ಮತ್ತಿತರರು ಮನವಿ ಸಲ್ಲಿಸಿದರು.

ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಭಾಗಮಂಡಲ-ತಲಕಾವೇರಿ ನಡುವೆ ಎರಡು ಗ್ಲಾಸ್ ಬ್ರಿಡ್ಜ್ ನಿರ್ಮಿಸಲು ಉದ್ಯಮಿಗಳಿಗೆ ಅನುಮತಿ ನೀಡಲಾಗಿದೆ. 2020ರ ಆಗಸ್ಟ್ ತಿಂಗಳಿನಲ್ಲಿ ತಲಕಾವೇರಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಐವರ ಜೀವಹಾನಿಯಾಗಿದೆ. ಈ ಬಗ್ಗೆ ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ ನಡೆಸಿದ ಅಧ್ಯಯನದಲ್ಲಿ ಈ ಭೂಕುಸಿತಕ್ಕೆ ತಲಕಾವೇರಿಯ ಪರ್ವತ ಸಾಲುಗಳಲ್ಲಿ ಬೃಹತ್ ಯಂತ್ರಗಳನ್ನು ಬಳಸಿ ನಡೆಸಿದ ಭೂ ಅಭಿವೃದ್ಧಿ ಕಾಮಗಾರಿಯೇ ಕಾರಣ ಎಂಬುದು ದೃಢ ಪಟ್ಟಿದೆ.

ತಲಕಾವೇರಿ ಜಿಲ್ಲೆಯ ಜನರ ಶ್ರದ್ಧಾಭಕ್ತಿಯ ಕ್ಷೇತ್ರವಾಗಿದೆ. ಈ ಕ್ಷೇತ್ರವನ್ನು ಪ್ರವಾಸಿ ಕೇಂದ್ರವಾಗಿ ಪ್ರಚಾರ ಮಾಡಿದ ಪರಿಣಾಮ ಇಲ್ಲಿ ಪ್ರವಾಸಿಗರ ವರ್ತನೆ ನಿಯಮ ಮೀರಿದೆ. ತೀರ್ಥಕ್ಷೇತ್ರದ ಸಮೀಪವೇ ಗ್ಲಾಸ್ ಬ್ರಿಡ್ಜ್ ನಿರ್ಮಾಣವಾದರೆ ಭಕ್ತಾಧಿಗಳಿಗಿಂತ ಪ್ರವಾಸಿಗರೇ ಅಧಿಕ ಸಂಖ್ಯೆಯಲ್ಲಿ ಆಗಮಿಸುವ ಅಪಾಯವಿದೆ ಎಂದು ಪೂವಯ್ಯ ಗಮನ ಸೆಳೆದರು.

 

1986ರ ಪರಿಸರ ಕಾಯ್ದೆ ಪ್ರಕಾರ ತಲಕಾವೇರಿ ವನ್ಯಧಾಮವನ್ನು ಸೂಕ್ಷ್ಮ ಪರಿಸರ ವಲಯ ಎಂದು ಕೇಂದ್ರದ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಘೋಷಿಸಿದೆ. ಈ ಘೋಷಣೆಯಂತೆ ರಾಜ್ಯ ಸರಕಾರ ಜೋನಲ್ ಪ್ಲಾನ್ ರೂಪಿಸಬೇಕಿದೆ. ಆದರೆ ಈ ಬಗ್ಗೆ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ.

ಮಡಿಕೇರಿ ಸಮೀಪದ ಉಡೋತ್ ನಲ್ಲಿ ನಿರ್ಮಾಣಗೊಂಡಿರುವ ಗಾಕಿನ ಸೇತುವೆಯಿಂದ ಸ್ಥಳೀಯರಿಗೆ ಹಾಗೂ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಎಲ್ಲರಿಗೂ ಅರಿವಿದೆ. ಸ್ಥಳೀಯ ಗ್ರಾ.ಪಂ, ಪೆÇಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಯಾವ ಪರಿಹಾರೋಪಾಯವನ್ನೂ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಭಾಗಮಂಡಲ, ತಲಕಾವೇರಿಯಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಾಣವಾದರೆ ಇದೇ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಿಸಲು ನೀಡಿರುವ ಅನುಮತಿಯನ್ನು ರದ್ದುಪಡಿಸಬೇಕೆಂದು ಪೂವಯ್ಯ ಒತ್ತಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News