ಕೊಪ್ಪ: ವಂಚನೆ ಪ್ರಕರಣದ ಆರೋಪಿ ಚೈತ್ರಾ ಕುಂದಾಪುರ ಬಂಧನದ ಬೆನ್ನಲ್ಲೇ ಈಡುಗಾಯಿ ಒಡೆದು ಹರಕೆ ತೀರಿಸಿದ ಗ್ರಾಮಸ್ಥರು

Update: 2023-09-17 13:14 GMT

ಚಿಕ್ಕಮಗಳೂರು, ಸೆ.17: ಕೋಟ್ಯಂತರ ರೂ. ವಂಚನೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರ ವಶದಲ್ಲಿರುವ ಚೈತ್ರಾ ಕುಂದಾಪುರ ಈ ಹಿಂದೆ ತಮ್ಮ ಗ್ರಾಮದಲ್ಲಿ ಧ್ವೇಷ ಭಾಷಣ ಮಾಡುವ ಮೂಲಕ ಶಾಂತಿ ಕದಡುವ ಪ್ರಯತ್ನ ಮಾಡಿದ್ದು, ʼʼಶಾಂತಿ ಕದಡಿದವರಿಗೆ ದೇವರು ತಕ್ಕ ಶಾಸ್ತಿ ಮಾಡಿದೆ. ಗ್ರಾಮ ಈಗ ಶುದ್ಧವಾಗಿದೆʼʼ ಎಂದು ಗ್ರಾಮಸ್ಥರು ಈಡು ಗಾಯಿ ಒಡೆದು ಹರಕೆ ತೀರಿಸಿರುವ ಘಟನೆ ವರದಿಯಾಗಿದೆ. 

ʼʼಕಳೆದ ಒಂದು ವರ್ಷದ ಹಿಂದೆ ಮಾವಿನಕಟ್ಟೆ ಗ್ರಾಮದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚೈತ್ರಾ ಕುಂದಾಪುರ ಗ್ರಾಮದಲ್ಲಿ ಬೇರೆ ಸಮುದಾಯದವರು ಯಾರೂ ಇಲ್ಲದಿದ್ದರೂ ಉದ್ದೇಶಪೂರ್ವಕವಾಗಿ ಇತರ ಧರ್ಮದ ವಿರುದ್ಧ ಅವಹೇಳನಕಾರಯಾಗಿ ಮತ್ತು ಧ್ವೇಷಕಾರುವ ಭಾಷಣ ಮಾಡುವ ಮೂಲಕ ಸಾಮರಸ್ಯ ಕದಡುವ ಕೆಲಸ ಮಾಡಿದ್ದಳುʼʼ ಎಂದು ಗ್ರಾಮಸ್ಥರು ದೂರಿದ್ದಾರೆ. 

ಚೈತ್ರಾ ಭಾಷಣದಿಂದ ಗ್ರಾಮದಲ್ಲಿ ವಾಸವಿರುವ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿತ್ತು. ಗ್ರಾಮದ ಶಾಂತಿ, ಸಾಮರಸ್ಯಕ್ಕೆ ತೊಂದರೆಯಾಗಿತ್ತು ಎಂದು ಆರೋಪಿಸಿ ಅಂದು ಗ್ರಾಮದ ನಾಗರಿಕರು ಆನೆ ವಿಘ್ನೇಶ್ವರ ಬ್ರಹ್ಮ ಜಟಿಗೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಶಾಂತಿ ಕದಡಲು ಪ್ರಯತ್ನಿಸಿದವರಿಗೆ ತಕ್ಕ ಪಾಠ ಕಲಿಸಬೇಕೆಂದು ಹರಕೆ ಹೊತ್ತಿದ್ದರು.

ಸದ್ಯ ಚೈತ್ರಾ ಕುಂದಾಪುರ ಉದ್ಯಮಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ತನ್ನ ಸಹಚರರೊಂದಿಗೆ ಸೇರಿ ಕೋಟ್ಯಂತರ ರೂ. ವಂಚನೆ ಮಾಡಿರುವ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದು, ಈ ಘಟನೆಯ ಹಿನ್ನೆಲೆಯಲ್ಲಿ ಮಾವಿನಕಟ್ಟೆ ಗ್ರಾಮಸ್ಥರು ಗುರುವಾರ ಗ್ರಾಮದ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಈಡುಗಾಯಿ ಒಡೆದು ಹರಕೆ ತೀರಿಸಿದ್ದಾರೆಂದು ತಿಳಿದು ಬಂದಿದೆ. 

 

 

 

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News