ಕೊಪ್ಪ: ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ
ಚಿಕ್ಕಮಗಳೂರು, ಜು.27: ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ವಸತಿ ನಿಲಯದ ಸ್ನಾನ ಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ಬೆಳಗ್ಗೆ ಕೊಪ್ಪ ತಾಲೂಕಿನ ಹರಂದೂರು ಗ್ರಾಮದಲ್ಲಿ ವರದಿಯಾಗಿದೆ.
ಮೊರಾರ್ಜಿ ವಸತಿ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಅಮೂಲ್ಯ(15) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿಯಾಗಿದ್ದು, ಆತ್ಮಹತ್ಯೆಗೆ ಕಾರಣ ಏನೆಂದು ತಿಳಿದು ಬಂದಿಲ್ಲ. ಅಮೂಲ್ಯ ಕೊಪ್ಪ ತಾಲೂಕಿನ ನಾರ್ವೆ ಗ್ರಾಮದ ಮಹೇಶ್ ಹಾಗೂ ಆಶಾ ದಂಪತಿ ಮಗಳಾಗಿದ್ದು, ಹರಂದೂರು ಗ್ರಾಮದ ಮೊರಾರ್ಜಿ ದೇಸಾಯಿ ವಸತಿಯಲ್ಲಿ ಕಳೆದ ಕೆಲ ವರ್ಷಗಳಿಂದ ವ್ಯಾಸಂಗ ಮಾಡುತ್ತಿದ್ದ ಅಮೂಲ್ಯಾ ಬುಧವಾರ ರಾತ್ರಿ ತನ್ನ ಸಹಪಾಠಿಗಳೊಂದಿಗೆ ಎಂದಿನಂತೆ ಓದಿಕೊಂಡು ನಂತರ ನಿದ್ರೆಗೆ ಜಾರಿದ್ದಳು. ಆದರೆ ಗುರುವಾರ ಮುಂಜಾನೆ ವಸತಿ ಶಾಲೆಯ ಸ್ನಾನ ಗೃಹಕ್ಕೆ ತೆರಳಿದ್ದ ಅಮೂಲ್ಯಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಹಪಾಠಿಗಳು ಸ್ನಾನ ಗೃಹಕ್ಕೆ ತೆರಳಿದ್ದ ವೇಳೆ ಅಮೂಲ್ಯಾ ಆತ್ಮಹತ್ಯೆಗೆ ಶರಣಾಗಿರುವ ವಿಷಯ ಬೆಳಕಿಗೆ ಬಂದಿದೆ.
ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರ ತನಿಖೆಯಿಂದ ಬಾಲಕಿಯ ಆತ್ಮಹತ್ಯೆಗೆ ಕಾರಣ ಏನೆಂದು ತಿಳಿದು ಬರಬೇಕಿದೆ.
ಕೊಪ್ಪ ತಾಲೂಕು ಆಸ್ಪತ್ರೆಯಲ್ಲಿ ಬಾಲಕಿಯ ಶವ ಪರೀಕ್ಷೆ ನಡೆದ ಬಳಿಕ ಮೃತ ದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ. ಆಮೂಲ್ಯ ಆತ್ಮಹತ್ಯೆ ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸಬೇಕೆಂದು ಸಾರ್ವಜನಿಕರು, ಸಂಬಂಧಿಕರು ಆಗ್ರಹಿಸಿದ್ದಾರೆ.