ಕೊಪ್ಪಳ | ಮರಕುಂಬಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣ : 98 ಜನರಿಗೆ ಜೀವಾವಧಿ ಶಿಕ್ಷೆ ಪ್ರಕಟ
ಕೊಪ್ಪಳ/ಗಂಗಾವತಿ : ತಾಲೂಕಿನ ಮರಕುಂಬಿ ಗ್ರಾಮದಲ್ಲಿ 2014ರಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯ ಮತ್ತು ನಂತರ ಅವರ ಓಣಿಗೆ ಹೋಗಿ ಗುಡಿಸಲುಗಳಿಗೆ ಬೆಂಕಿ, ಹಚ್ಚಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 101 ಆರೋಪಿಗಳ ವಿರುದ್ದ ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಆರೋಪ ಸಾಬೀತಾಗಿದ್ದು, ಗುರುವಾರ ತೀರ್ಪು ಪ್ರಕಟಿಸಿದೆ.
101 ಮಂದಿ ಅಪರಾಧಿಗಳಲ್ಲಿ 98 ಜನರಿಗೆ ಜೀವಾವಧಿ ಶಿಕ್ಷೆ, 5 ಸಾವಿರ ದಂಡ ವಿಧಿಸಿದೆ. ಇನ್ನೂ ಮೂವರು ಅಪರಾಧಿಗಳು ಕೂಡಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ್ದು, ಇದರಿಂದಾಗಿ ಜಾತಿ ನಿಂದನೆ ಕಾಯ್ದೆ ಅನ್ವಯವಾಗಿಲ್ಲ. ಹೀಗಾಗಿ ಈ ಮೂವರಿಗೆ 5 ವರ್ಷ ಜೈಲು ಶಿಕ್ಷೆ, 2 ಸಾವಿರ ರೂ. ದಂಡ ವಿಧಿಸಲಾಗಿದೆ.
ಸೋಮವಾರ ಈ ಪ್ರಕರಣದ ಕುರಿತು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶದಾದ ಸಿ.ಚಂದ್ರಶೇಖರ್ ಅವರು 9 ವರ್ಷಗಳ ನಂತರ ಆರೋಪ ಸಾಬೀತು ನಿರ್ಧಾರ ಪ್ರಕಟಿಸಿದ್ದು, ಶಿಕ್ಷೆಯ ಪ್ರಮಾಣವನ್ನು ಗುರುವಾರ (ಅ.24)ದಂದು ಪ್ರಕಟಿಸಲು ತೀರ್ಪು ಕಾಯ್ದಿರಿಸಿದ್ದರು.
ಪ್ರಕರಣವೇನು?
2014ರಲ್ಲಿ ಗಂಗಾವತಿ ತಾಲೂಕಿನ ಮುರುಕುಂಬಿ ಗ್ರಾಮದಲ್ಲಿ ಕ್ಷೌರ ದಂಗಡಿ ಮತ್ತು ಹೋಟೆಲ್‌ಗಳಲ್ಲಿ ದಲಿತರಿಗೆ ಪ್ರವೇಶಿಸಲು ನಿರಾಕರಣೆಯ ಕುರಿತು ಜಗಳವಾಗಿತ್ತು. ಪೊಲೀಸ್ ಅಧಿಕಾರಿಗಳು ಮುರುಕುಂಬಿಗೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದರು. ಈ ಸಿಟ್ಟಿನಿಂದ ಸರ್ವಣೀಯರು ರಾತ್ರಿ ಸಮಯದಲ್ಲಿ ದಲಿತರ ಓಣಿಗೆ ನುಗ್ಗಿ ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದರು.
ಈ ಘಟಣೆಗೆ ಸಂಬಂಧಿಸಿದಂತೆ ಗ್ರಾಮದ 117 ಜನರ ವಿರುದ್ಧ ಪ್ರಕರಣ ಪ್ರಕರಣ ದಾಖಲಾಗಿತ್ತು. ಇದರಲ್ಲಿ ಕೆಲ ಆರೋಪಿಗಳು ಈಗಾಗಲೇ ಮೃತಪಟ್ಟಿದ್ದಾರೆ. ಇದರಲ್ಲಿ 101 ಜನರ ವಿರುದ್ಧ ಆರೋಪ ಸಾಬಿತಾಗಿದ್ದು, ಅದರಲ್ಲಿ ವಿಚಾರಣೆಗೆ ಹಾಜರಾಗಿದ್ದ 100 ಜನರನ್ನು ಬಂಧಿಸಿದ್ದರು. ಇನ್ನೊಬ್ಬ ವಿಚಾರಣೆಗೆ ಹಾಜರಾಗಿರಲ್ಲಿಲ್ಲ. ಆದ್ದರಿಂದ ಆತನ ಬಂಧನ ಆಗಿಲ್ಲರಲಿಲ್ಲ, ಆದರೆ ಆತನನ್ನು ಬಳಿಕ ಪೊಲೀಸರು ಬಂಧಿಸಿದ್ದಾರೆ.