ಸಿಎಂ ವಿರುದ್ಧ ತನಿಖೆಗೆ ಯಾವ ಪೊಲೀಸ್ ಅಧಿಕಾರಿ ಮನವಿ ಮಾಡಿದ್ದರು? : ಕೃಷ್ಣ ಬೈರೇಗೌಡ

Update: 2024-08-17 14:11 GMT

ಬೆಂಗಳೂರು : ‘ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಲು ಯಾವ ಪೊಲೀಸ್ ಅಧಿಕಾರಿ ತಮಗೆ ಮನವಿ ಮಾಡಿದ್ದರು ಎಂಬುದನ್ನು ತಿಳಿಸಿ’ ಎಂದು ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್‍ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರಶ್ನಿಸಿದರು.

ಶನಿವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವ ಮೊದಲು ಪ್ರಾಥಮಿಕ ತನಿಖೆ ನಡೆಯಬೇಕು. ಕೇಂದ್ರ ಸರಕಾರವು 2021ರ ಸೆ.3ರಂದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988ರ ಸೆಕ್ಷನ್ 17ಎ ಅನ್ನು ಹೇಗೆ ಪರಿಗಣಿಸಬೇಕೆಂದು ನಿಯಮಾವಳಿ ರೂಪಿಸಿ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಕಳುಹಿಸಿಕೊಟ್ಟಿದ್ದಾರೆ ಎಂದರು.

ಪೊಲೀಸ್ ಅಧಿಕಾರಿಗಳು ಒಂದು ನಿರ್ದಿಷ್ಟ ಹುದ್ದೆಯಲ್ಲಿರುವ ವ್ಯಕ್ತಿಯನ್ನು ತನಿಖೆಗೆ ಒಳಪಡಿಸಲು ಈ ಸೆಕ್ಷನ್ ಅಡಿ ಅನುಮತಿ ಪಡೆಯಬೇಕು. ಈ ಪ್ರಕರಣದಲ್ಲಿ ಯಾವ ಪೊಲೀಸ್ ಅಧಿಕಾರಿ ಅನುಮತಿ ಪಡೆದಿದ್ದಾರೆ? ಯಾವ ಪೊಲೀಸ್ ಅಧಿಕಾರಿ ನಿಮಗೆ ಮುಖ್ಯಮಂತ್ರಿ ವಿರುದ್ಧ ತನಿಖೆ ನಡೆಸಲು ಅನುಮತಿ ಕೇಳಿದ್ದಾರೆ ಆ ದಾಖಲೆ ಕೊಡಿ ಎಂದು ಅವರು ಆಗ್ರಹಿಸಿದರು.

ಪೊಲೀಸ್ ಅಧಿಕಾರಿಗಳು ತನಿಖೆಗೆ ಅನುಮತಿ ನೀಡಿ ಎಂದು ಈ ಹಿಂದೆ ಕೇಳಿರುವ ನಾಲ್ಕು ಪ್ರಕರಣಗಳು ನಿಮ್ಮ ಮುಂದೆ ಬಾಕಿ ಇವೆ. ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ದನ್ ರೆಡ್ಡಿ ಅವರ ಮೇಲೆ ತನಿಖೆ ನಡೆಸಲು ಲೋಕಾಯುಕ್ತ ಅನುಮತಿ ಕೇಳಿದ್ದರೂ ನೀಡಿಲ್ಲ. ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಯಾವ ಪೊಲೀಸ್ ಅಧಿಕಾರಿಯೂ ಅನುಮತಿ ಕೇಳದಿದ್ದರೂ ಏಕೆ ನೀಡಿದ್ದೀರಾ? ಎಂದು ಕೃಷ್ಣ ಬೈರೇಗೌಡ ಪ್ರಶ್ನಿಸಿದರು.

ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವಾಗ ಪ್ರಕರಣದಲ್ಲಿ ತಪ್ಪು ಮಾಡಿರುವವರ ವಿರುದ್ಧ ದಾಖಲೆ ಇರಬೇಕು. ಯಾರ ಮೇಲೆ ಆಪಾದನೆ ಬಂದಿದೆ ಅವರು ಯಾವ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ ಎಂಬುದನ್ನು ದಾಖಲೆ ಸಮೇತ ಪೊಲೀಸರು ರಾಜ್ಯಪಾಲರಿಗೆ ನೀಡಬೇಕು. ಆಗ ಮಾತ್ರ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲು ಸಾಧ್ಯ. ಭಾರತ ಸರಕಾರವು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವ ಮುಂಚೆ ಯಾವ, ಯಾವ ದಾಖಲೆಗಳನ್ನು ಒದಗಿಸಬೇಕು ಎಂಬುದಕ್ಕೆ ಪಟ್ಟಿಯನ್ನು ನೀಡಿದ್ದಾರೆ. ಇವುಗಳಲ್ಲಿ ಒಂದೇ ಒಂದು ದಾಖಲೆಯನ್ನು ರಾಜ್ಯಪಾಲರು ತೋರಿಸಲಿ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಅನುಮತಿ ಕೊಡಿ ಎಂದು ಮನವಿ ಮಾಡುವ ಅಧಿಕಾರ ಇರುವುದು ಪೊಲೀಸ್ ಮಹಾನಿರ್ದೇಶಕ ಹಾಗೂ ಅದಕ್ಕೆ ಸರಿಸಮವಾದ ಹುದ್ದೆಯ ಅಧಿಕಾರಿಗೆ ಮಾತ್ರ. ಪ್ರಸ್ತುತ ರಾಜ್ಯಪಾಲರು ಅನುಮತಿ ನೀಡಿರುವುದು ಸಂಪೂರ್ಣ ಕಾನೂನುಬಾಹಿರ. ಇತ್ತೀಚಿಗೆ ಸುಪ್ರೀಂಕೋರ್ಟ್‍ನ ನ್ಯಾ.ನಾಗರತ್ನ ಅವರು ಕೆಲವು ರಾಜ್ಯಪಾಲರು ಕೇವಲ ಒಂದು ಪಕ್ಷದ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿರುವುದನ್ನು ಕೃಷ್ಣ ಬೈರೇಗೌಡ ಉಲ್ಲೇಖಿಸಿದರು.

ಸಿದ್ದರಾಮಯ್ಯ ಬಹುಮತ ಪಡೆದು ಆಯ್ಕೆಯಾದ ಮುಖ್ಯಮಂತ್ರಿ. ಕನ್ನಡಿಗರ ಸ್ವಾಭಿಮಾನದ ಸಂಕೇತ. ದಿಲ್ಲಿಯಲ್ಲಿರುವ ಸರಕಾರದ ಅಡಿಯಾಳಾಗಿ ಕೆಲಸ ಮಾಡಲು ಅವರು ಒಪ್ಪುವುದಿಲ್ಲ. ಆದುದರಿಂದ, ಕರ್ನಾಟಕದ ಮೇಲೆ ಕನ್ನಡಿಗರ ಮೇಲೆ ಮಾಡುತ್ತಿರುವ ಪ್ರಹಾರವಿದು ಎಂದು ಅವರು ಹೇಳಿದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ರಾಜ್ಯಪಾಲರ ನಡೆ ಕಾನೂನು ಬಾಹಿರ, ತತ್ವ ರಹಿತ, ರಾಜಕೀಯ ಪ್ರೇರಿತವಾದಂತಹ ನಿರ್ಧಾರ. ಕೆಟ್ಟ ಬೆಳವಣಿಗೆಗೆ ಆಸ್ಪದ ನೀಡಿದ್ದಾರೆ. ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ ಕಾಂಗ್ರೆಸ್ ಸರಕಾರ 6 ತಿಂಗಳಲ್ಲಿ, 10 ತಿಂಗಳಲ್ಲಿ ಪತನವಾಗುತ್ತದೆ ಎಂದು ಪದೇ ಪದೇ ಹೇಳುತ್ತಿದ್ದರು. 10 ದಿನದಲ್ಲಿ ಕಾಂಗ್ರೆಸ್ ಸರಕಾರಕ್ಕೆ ಇದು ಗೊತ್ತಾಗುತ್ತದೆ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡುತ್ತಿದ್ದರು. ರಾಜ್ಯಪಾಲರ ನಡೆಯಿಂದ ಇವರ ಕುತಂತ್ರ ಕನ್ನಡದ ಜನತೆಗೆ ಗೊತ್ತಾಗಿದೆ ಎಂದರು.

ಕನ್ನಡಿಗರ ಬಹುಮತದ ಮೇಲೆ ಆಯ್ಕೆಯಾಗಿರುವ ಸಿದ್ದರಾಮಯ್ಯರನ್ನು ಹಾಗೂ ಕಾಂಗ್ರೆಸ್ ಸರಕಾರವನ್ನು ಯಾವುದೇ ಕುತಂತ್ರದ ಮೂಲಕ ಬುಡಮೇಲು ಮಾಡಲು ಆಗುವುದಿಲ್ಲ. ಕೇಂದ್ರ ಸರಕಾರದ ವಿರುದ್ಧ ಸಿದ್ದರಾಮಯ್ಯ ಅತ್ಯಂತ ದಿಟ್ಟ ನಿಲುವುಗಳನ್ನು ತೆಗೆದುಕೊಂಡರು. ನಮ್ಮ ತೆರಿಗೆ ನಮ್ಮ ಹಕ್ಕು, ಬರ ಪರಿಹಾರ ನೀಡುವಲ್ಲಿ ವಿಳಂಬದ ಕುರಿತು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಕೇಂದ್ರ ಸರಕಾರವನ್ನು ಟೀಕೆ ಮಾಡಿದ ಕಾರಣಕ್ಕೆ ಅವರ ವಿರುದ್ಧ ಸೇಡಿನ ರಾಜಕಾರಣ ಮಾಡಲಾಗುತ್ತಿದೆ ಎಂದು ಎಚ್.ಕೆ.ಪಾಟೀಲ್ ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಸಚಿವರಾದ ಡಾ.ಜಿ.ಪರಮೇಶ್ವರ್, ಕೆ.ಜೆ.ಜಾರ್ಜ್, ಎನ್.ಚಲುವರಾಯಸ್ವಾಮಿ, ಡಾ.ಎಚ್.ಸಿ.ಮಹದೇವಪ್ಪ, ಪ್ರಿಯಾಂಕ್ ಖರ್ಗೆ, ಭೈರತಿ ಸುರೇಶ್, ಎನ್.ಎಸ್.ಭೋಸರಾಜು, ಡಾ.ಎಂ.ಸಿ. ಸುಧಾಕರ್, ಪರಿಷತ್ ಸದಸ್ಯರಾದ ಸಲೀಮ್ ಅಹ್ಮದ್, ಬಲ್ಕೀಸ್ ಬಾನು, ವೆಂಕಟೇಶ್, ಶಾಸಕರಾದ ಶಿವಲಿಂಗೇಗೌಡ, ಎ.ಎಸ್.ಪೊನ್ನಣ್ಣ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News