ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಪ್ರಶ್ನಿಸಿದರೆ ದೇಶದ್ರೋಹಿಯೇ? : ಕೃಷ್ಣ ಬೈರೇಗೌಡ

Update: 2024-10-27 13:54 GMT

ಬೆಂಗಳೂರು : ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಪ್ರಶ್ನಿಸಿದವರನ್ನು ದೇಶದ್ರೋಹಿ ಎಂದರೆ ನಾವು ಎಲ್ಲಿ ಹೋಗುವುದು. ನಮ್ಮ ಸಮಸ್ಯೆಗಳನ್ನು ಹೇಳಬಾರದೇ. ನಮ್ಮ ಸ್ಥಾನಮಾನವನ್ನು ಕುಗ್ಗಿಸಿದರೆ ಒಕ್ಕೂಟ ವ್ಯವಸ್ಥೆ ಶೀಥಿಲವಾಗಲು ಕಾರಣವಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದ ಕನ್ನಡ ಸಾಹಿತ್ಯ ಪರಿಷತ್‍ನಲ್ಲಿರುವ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಕೆ.ಪಿ.ಸುರೇಶ ಅನುವಾದಿಸಿರುವ ದಕ್ಷಿಣ- ಉತ್ತರ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗ ಕೂಡ ರಾಜ್ಯಗಳ ಪರ ಇಲ್ಲದಿದ್ದದರೂ, ರಾಜ್ಯಗಳ ಸಮಸ್ಯೆಗಳ ಕುರಿತು ಮಾತನಾಡುವ, ಚರ್ಚಿಸುವ ವ್ಯವಧಾನ ಇತ್ತು. ಈಗ ಕೇಂದ್ರವನ್ನು ಪ್ರಶ್ನಿಸಿದರೆ ಆ ರಾಜ್ಯದವರು ದೇಶದ್ರೋಹಿಗಳಾ? ಎಂದು ಪ್ರಶ್ನಿಸಿದರು.

ಹಿಂದಿ ಆಡಳಿತ ಭಾಷೆ, ಹಾಗಂತ ರಾಷ್ಟ್ರಭಾಷೆ ಅಲ್ಲ. ಈ ಮಾತನ್ನು ಕೇಂದ್ರ ಸರಕಾರವೇ ಹಿಂದೆ ಹೇಳಿತ್ತು. ಆ ಕಾರಣದಿಂದಾಗಿ ನಾವೆಲ್ಲರೂ ಭಾರತೀಯರಯ ಎಂದು ಒಪ್ಪಿಕೊಂಡಿರುವುದು. ಎಲ್ಲ ಪ್ರಾದೇಶಿಕ ಸಮಸ್ಯೆಗಳಿಗೆ ಕೇಂದ್ರ ಮತ್ತು ರಾಜ್ಯಗಳು ಒಂದಾಗಿ ಸಮಸ್ಯೆಗೆ ಪರಿಹಾರ ಹುಡುಕುವ ಪ್ರಯತ್ನ ಮಾಡುತ್ತಿರುವುದರಿಂದ ಒಕ್ಕೂಟ ವ್ಯವಸ್ಥೆ ಬಲವಾಗುತ್ತದೆ. ನಮ್ಮ ಸಂಸದರು ರಾಜ್ಯದ ಪರ ಮಾತನಾಡಿದರೆ ದೇಶದ್ರೋಹಿ ಎಂದು ಕರೆದರು. ಹೀಗೆ ಕರೆದು ಎಷ್ಟು ದಿನ ನಮ್ಮ ದ್ವನಿಯನ್ನು ಅಡಗಿಸಬಬಹುದು ಎಂದು ಪ್ರಶ್ನಿಸಿದರು.

ಒಕ್ಕೂಟ ವ್ಯವಸ್ಥೇ ಸುಭದ್ರವಾಗಿರಲು ರಾಜ್ಯದ ಎಲ್ಲ ಸಮಸ್ಯೆಗಳ ಬಗ್ಗೆ ಮಾತನಾಡಬೇಕು. ಅವುಗಳನ್ನು ಬಗೆಹರಿಸಬೇಕು. ಅನ್ಯಾಯವಾಗುತ್ತಿದೆ ಎಂದರೆ ದೇಶ ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳುವುದು ಬದಲಾಗಬೇಕು. ನಮ್ಮ ಧ್ವನಿ ಅಡಗಿಸಿ ನ್ಯಾಯ ಕೇಳುವವರನ್ನು ಆತಂಕವಾದಿ ಎಂದು ಹೇಳಲಾಗುತ್ತಿದೆ. ಇದನ್ನೇ ಬ್ರಿಟೀಷರು ಮಾಡುತ್ತಿದ್ದರು. ತೆರಿಗೆ ಹಾಕುವ ಹಕ್ಕು, ಮತ್ತು ತೆರಿಗೆ ಹಂಚಿಕೆ ಇವುಗಳೇ ಪ್ರಜಾಪ್ರಭುತ್ವ ಉಗಮವಾಗಲು ಕಾರಣ ಎಂದು ತಿಳಿಸಿದರು.

ಸರಕಾರ ಎಂದು ಕರೆಯಲು ಹಾಗೂ ತನ್ನದೇ ಆದ ತೆರಿಗೆ ಮೂಲದಿಂದ ಆದಾಯವನ್ನು ಸೃಜನ ಮಾಡುವ ಶಕ್ತಿ ಇದ್ದಾಗ ಮಾತ್ರ ಸರಕಾರಕ್ಕೆ ಅರ್ಥ ಇರುತ್ತದೆ. ಸರಕಾರ ಸ್ವಾಯತ್ತವಾಗಿ ಕೆಲಸ ಮಾಡುಲು ಆದಾಯ ಮುಖ್ಯವಾಗಿದೆ. ಆದಾಯದ ಹಂಚಿಕೆ ಬಗ್ಗೆ ದಕ್ಷಿಣ- ಉತ್ತರ ಪುಸ್ತಕದಲ್ಲಿ ತಿಳಿಯಬಹುದು ಎಂದರು.

ನಮ್ಮ ರಾಜ್ಯ ಯಾಕೆ ಆರ್ಥಿಕವಾಗಿ ಮುಂದಿದೆ ಎಂದರೆ, ಅನುದಾನವನ್ನು ಆರೋಗ್ಯ, ಶಿಕ್ಷಣ ಸೇರಿ ಸಾಮಾಜಿಕ ಕೆಲಸಗಳಿಗೆ ಬಳಸಿದ್ದೇವೆ. ನಮ್ಮ ತೆರಿಗೆ ಹಣ ಉತ್ತರ ಭಾರತಕ್ಕೆ ಹರಿದು ಹೋದರೂ ಅವರ ಇಚ್ಛಾಶಕ್ತಿಯ ಕಾರಣದಿಂದ ಇರಬಹುದು ಅಲ್ಲಿ ಅಭಿವೃದ್ಧಿಯಾಗಿಲ್ಲ. ಅವು ಹಿಂದುಳಿದಿವೆ ಎಂದು ನಮ್ಮ ಮೇಲೆ ಹೆಚ್ಚು ತೆರಿಗೆ ಹಾಕಲಾಗುತ್ತಿದೆ. ಬೇರೆ ರಾಜ್ಯಗಳಿಗೆ ನಮ್ಮ ಹಣ ನೀಡಿದಾಗಲೂ ಅವು ಅಭಿವೃದ್ಧಿಯೇ ಆಗಿಲ್ಲ ಎಂದು ಮಾಹಿತಿ ನೀಡಿದರು.

ಗ್ರಾಮೀಣಾಭಿವೃದ್ಧಿ ಪಂಚಾಯತ್‍ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಸಾಮಾನ್ಯ ಜನರಿಗೆ ಹಣಕಾಸು ಆಯೋಗದ ಬಗ್ಗೆ ಹೇಳಿದರೆ ಅರ್ಥವಾಗುವುದಿಲ್ಲ. ಅದಕ್ಕಾಗಿ ನಾವು ಸರಳವಾಗಿಸಬೇಕಾಗುತ್ತದೆ. ಉತ್ತರ ಪ್ರದೇಶದವರು 100ರೂ. ತೆರಿಗೆ ನೀಡಿದರೆ ಅವರಿಗೆ 333ರೂ. ಸಿಗುತ್ತದೆ. ಮದ್ಯಪ್ರದೇಶ 100 ರೂ. ತೆರಿಗೆ 295 ರೂ. ನೀಡಿದರೆ, ಬಿಹಾರ 100 ರೂ. ತೆರಿಗೆ ನೀಡಿದರೆ 922 ರೂ., ಒಡಿಸ್ಸಾ 100 ರೂ. ನೀಡಿದರೆ 187 ರೂ. ಆದರೆ ಕರ್ನಾಟಕ 100 ರೂ. ತೆರಿಗೆ ನೀಡಿದರೆ ನಮಗೆ ಸಿಗುವುದು ಕೇವಲ 12 ರೂ. ಮಾತ್ರ ಎಂದು ಮಾಹಿತಿ ನೀಡಿದರು.

ಕೇಂದ್ರಕ್ಕೆ ನೀಡುವ ನಮ್ಮ ತೆರಿಗೆಯಲ್ಲಿ ನಾವು 100 ರೂ. ಕೊಡಲು ಕೇಳುತ್ತಿಲ್ಲ. ಆದರೆ 20ರಿಂದ 25 ರೂ. ಆದರೂ ಸಿಕ್ಕರೆ ಸಾಕಷ್ಟು ಅಭಿವೃದ್ಧಿ ಮಾಡಬಹುದು. ನಾವು ಮಾತಾಡಬೇಕು ಎಂದು ಮಾತನಾಡುತ್ತಿಲ್ಲ. ಎಲ್ಲ ಅಂಕಿ ಅಂಶಗಳನ್ನು ಹಣಕಾಸು ಆಯೋಗದ ಮುಂದೆ ಇಟ್ಟಿದ್ದೇವೆ. ನಾವು ಕೆಲಸ ಮಾಡಿದ್ದೇವೆ. ನಮ್ಮ ಶ್ರಮದ ಹಣವನ್ನು ನಮಗೆ ನೀಡಿ ಎಂದು ಕೇಂದ್ರಕ್ಕೆ ಕೇಳುತ್ತಿದ್ದೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಚ್‍ಕೆಬಿಕೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಸಿಎಂ ಫೈಜ್, ಚಿತ್ರಸಾಹಿತಿ ಕವಿರಾಜ್, ಅನುವಾದಕ ಕೆ.ಪಿ.ಸುರೇಶ ಮತ್ತಿತರರು ಉಪಸ್ಥಿತರಿದ್ದರು.

ಕರ್ನಾಟಕ ಮತ್ತು ಬೆಂಗಳೂರಿನ ಮೇಲೆ ಪ್ರಪಂಚದ ಕಣ್ಣು ಇರಲು, ಪ್ರತಿಯೊಂದು ಕ್ಷೇತ್ರದಲ್ಲೂ ನಾವು ಬಂಡವಾಳ ಹೂಡುತ್ತಿದ್ದೇವೆ. ನಮ್ಮ ಪಾಲನ್ನು ಕಡಿಮೆ ಮಾಡಿ, ನಮ್ಮ ಕೈ ಕಟ್ಟಿಹಾಕಲಾಗುತ್ತಿದೆ. ಕರ್ನಾಟಕ ರಾಜ್ಯ ಚಿನ್ನದ ಮೊಟ್ಟೆ ಹಿಡುವ ಕೋಳಿ ಇದ್ದಂತೆ, ಅದರ ಕತ್ತು ಹಿಸುಕಿದರೆ ನಮಗೆ ಮಾತ್ರ ನಷ್ಟ ಅಲ್ಲ. ದೇಶಕ್ಕೆ ನಷ್ಟವಾಗುತ್ತದೆ ಯಾಕೆಂದರೆ ಅತಿಹೆಚ್ಚು ತೆರಿಗೆ ಕಟ್ಟುವ 2ನೇ ರಾಜ್ಯ ಕರ್ನಾಟಕವಾಗಿದೆ.

 -ಕೃಷ್ಣಬೈರೇಗೌಡ, ಕಂದಾಯ ಸಚಿವ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News