ʼಕ್ಷೀರಭಾಗ್ಯʼ ದಶಮಾನೋತ್ಸವ ಸಂಭ್ರಮ | ಯೋಜನೆಯ ಉದ್ದೇಶ ಸಾರ್ಥಕ ಎಂದ ಸಿಎಂ ಸಿದ್ದರಾಮಯ್ಯ

Update: 2023-09-06 06:00 GMT

ಸಂಗ್ರಹ ಚಿತ್ರ

ಬೆಂಗಳೂರು: ʼಕ್ಷೀರಭಾಗ್ಯ ಯೋಜನೆʼ ಜಾರಿಯಾಗಿ 10 ವರ್ಷ ಪೂರೈಸಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ ಹಾಲು ಒಕ್ಕೂಟದಿಂದ ಇಂದು ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದಲ್ಲಿ ರಾಜ್ಯಮಟ್ಟದ ಕ್ಷೀರಭಾಗ್ಯ ದಶಮಾನೋತ್ಸವ ಸಮಾರಂಭ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಭಾಗಿಯಾಗಲಿದ್ದಾರೆ

ಈ ಸಂಬಂಧ ಟ್ವೀಟ್ ಮೂಲಕ ಸಂತಸ ವ್ಯಕ್ತಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‌ʼʼಶಾಲಾ ವಿದ್ಯಾರ್ಥಿಗಳಿಗೆ ಬಿಸಿ ಹಾಲು ನೀಡುವ ಕ್ಷೀರಭಾಗ್ಯ ಯೋಜನೆಗೆ ಈಗ ದಶಮಾನೋತ್ಸವದ ಸಂಭ್ರಮ. ಈ ಸಡಗರವನ್ನು ಶಾಲೆಗಳಲ್ಲಿ ಖುಷಿಖುಷಿಯಾಗಿ ಹಾಲು ಕುಡಿಯುತ್ತಿರುವ ಮಕ್ಕಳ ಮುಖಗಳಲ್ಲಿ ನಾನು ಕಾಣುತ್ತಿದ್ದೇನೆʼʼ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ. 

ʼʼಒಂದನೇ ತರಗತಿಯಲ್ಲಿ ಬಿಸಿ ಹಾಲು ಕುಡಿಯಲಾರಂಭಿಸಿದ ಮಗುವೊಂದು ಈಗ ಹತ್ತನೇ ತರಗತಿಯ ಪ್ರೌಡ ವಿದ್ಯಾರ್ಥಿಯಾಗಿ ಕ್ಷೀರಭಾಗ್ಯ ಯೋಜನೆಯಿಂದ ತನ್ನ ದೇಹಕ್ಕೆ ಬಲ ಬಂತು, ಓದಲು ಹುಮ್ಮಸ್ಸು ಬಂತು ಎಂದೆಲ್ಲ ಹೇಳುತ್ತಿರುವುದನ್ನು ಕೇಳಿದಾಗ ಯೋಜನೆಯ ಉದ್ದೇಶ ಸಾರ್ಥಕವಾಯಿತು ಎಂದು ಅನಿಸುತ್ತದೆʼʼ ಎಂದು ತಿಳಿಸಿದ್ದಾರೆ. 

ʼʼಅಪೌಷ್ಟಿಕತೆ ನಿವಾರಣೆಯ ಜೊತೆಗೆ ಕಲಿಕೆಗೆ ಪ್ರೋತ್ಸಾಹ ನೀಡುವ ಸಲುವಾಗಿ 2013ರಲ್ಲಿ ನಮ್ಮ ಸರ್ಕಾರವು ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೊಳಿಸಿತ್ತು. ಕ್ಷೀರಭಾಗ್ಯ ಜಾರಿಗೊಂಡ ನಂತರದಿಂದ ಶಾಲಾ ಮಕ್ಕಳ ಪೌಷ್ಟಿಕ ಮಟ್ಟ ಸುಧಾರಣೆಯಾಗಿದೆ, ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಾಗಿದೆ ಮತ್ತು ರಾಜ್ಯದ ಹಾಲು ಉತ್ಪಾದಕ ಒಕ್ಕೂಟಗಳಿಗೂ ಬಲ ಬಂದಿದೆ ಎನ್ನುವುದನ್ನು ತಿಳಿಸಲು ಹೆಮ್ಮೆಯಾಗುತ್ತದೆʼʼ ಎಂದು ಮುಖ್ಯಮಂತ್ರಿಗಳು ಟ್ವೀಟ್‌ ಮಾಡಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News