KSOU ಪ್ರಶ್ನೆ ಪತ್ರಿಕೆ ಮಾರಾಟ ಜಾಲ ಬೆಳಕಿಗೆ: ಇಬ್ಬರು ಹಂಗಾಮಿ ನೌಕರರು ಪೊಲೀಸ್ ವಶಕ್ಕೆ
ಚಾಮರಾಜನಗರ, ಸೆ.26: ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಪ್ರಶ್ನೆ ಪತ್ರಿಕೆಗಳನ್ನು ಮಾರಾಟ ಮಾಡುವ ಜಾಲ ಬೆಳಕಿಗೆ ಬಂದಿದ್ದು, ಚಾಮರಾಜನಗರ ಪ್ರಾದೇಶಿಕ ಕೇಂದ್ರದಿಂದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಮುಕ್ತ ವಿವಿಯ ಚಾಮರಾಜನಗರ ಪ್ರಾದೇಶಿಕ ಕೇಂದ್ರದ ಇಬ್ಬರು ಹಂಗಾಮಿ ನೌಕರರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.
ಮೈಸೂರು ಜಿಲ್ಲೆಯ ವಿದ್ಯಾರ್ಥಿಯೋರ್ವ ನೀಡಿದ ದೂರಿನ ಆಧಾರದ ಮೇಲೆ ಮೈಸೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ಕೈಗೊಂಡು ಪರೀಕ್ಷೆ ಹಿಂದಿನ ದಿನ ಪ್ರಶ್ನೆ ಪತ್ರಿಕೆಗಳನ್ನು ವಾಟ್ಸ್ ಆ್ಯಪ್ ಮೂಲಕ ಕಳುಹಿಸಿ ಹಣ ಪಡೆಯುತ್ತಿದ್ದ ಜಾಲವನ್ನು ಬಯಲಿಗೆಳೆದಿದ್ದಾರೆ.
ಚಾಮರಾಜನಗರ ಪ್ರಾದೇಶಿಕ ಕೇಂದ್ರದ ನೌಕರರು ವಾಟ್ಸ್ ಆ್ಯಪ್ ಮೂಲಕ ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡುತ್ತಿದ್ದರು ಎನ್ನಲಾಗಿದ್ದು, ಆನ್‌ಲೈನ್ ಮೂಲಕ ಹಣ ಪಡೆದ ಇವರು ಮತ್ತೊಬ್ಬರಿಗೆ ಹಣ ಸಂದಾಯ ಮಾಡುತ್ತಿದ್ದರು ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.
ಬಿ.ಕಾಂ ಅಂತಿಮ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಮಾರಾಟ ಮಾಡುವಾಗ ವಿದ್ಯಾರ್ಥಿ ಗಮನಿಸಿ ಮೈಸೂರಿನ ಜಯಲಕ್ಷ್ಮಿಪುರಂ ಠಾಣೆಗೆ ದೂರು ಕೊಟ್ಟಿದ್ದನು. ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಕರಣದ ತನಿಖೆ ಕೈಗೊಂಡಿದ್ದಾರೆ.
ಪ್ರಕರಣ ಸಂಬಂಧ ಈ ಹಿಂದೆ ಬಿಕಾಂ ಅಂತಿಮ ವರ್ಷದ ಇಬ್ಬರು ವಿದ್ಯಾರ್ಥಿಗಳು ಬಂಧಿತರಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಸೆ. 4ರಿಂದ ಪದವಿ ವಿಭಾಗದ ಪರೀಕ್ಷೆಗಳು ಆರಂಭವಾಗಿತ್ತು. ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಬಂಧಿತ ವಿದ್ಯಾರ್ಥಿಗಳು 3 ಸಾವಿರ ರೂ. ಪಡೆದು ವಾಟ್ಸ್ ಆ್ಯಪ್‌ಗೆ ಕಳುಹಿಸಿದ್ದರು. ಹೀಗಾಗಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ಧೃಡಪಟ್ಟಿದ್ದು, ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದವರು ಯಾರು?. ಎಲ್ಲಿಂದ ಕಳುಹಿಸಲಾಗಿದೆ? ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ.
- ಮುತ್ತು ರಾಜ್, ಡಿಸಿಪಿ (ಕಾ-ಸು) ಮೈಸೂರು ನಗರ
---------------------------------------------------------------------
ಅಂತಿಮ ವರ್ಷದ ಬಿ.ಕಾಂ ಸೆಮಿಸ್ಟರ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ದೂರಿನ ಮೇರೆಗೆ ಜಯಲಕ್ಷ್ಮಿಪುರಂ ಪೊಲೀಸರು ಪರೀಕ್ಷಾಂಗ ಕೊಠಡಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಯಾದ ಕೊನೆಯ ಸೆಮಿಸ್ಟರ್ ಪರೀಕ್ಷೆಯನ್ನು ಮತ್ತೆ ಮಾಡಲು ನಿರ್ಧರಿಸಲಾಗಿದೆ.
- ಪ್ರೊ.ಕೆ.ವಿ.ಪ್ರವೀಣ್ , ಕುಲಸಚಿವರು (ಪರೀಕ್ಷಾಂಗ)