ಮರಕ್ಕೆ ಢಿಕ್ಕಿ ಹೊಡೆದ KSRTC ಬಸ್: ತಪ್ಪಿದ ಅನಾಹುತ
ಮಡಿಕೇರಿ ಸೆ.21 : ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿಯಾದ ಘಟನೆ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಸಮೀಪದ ಕುಂಬಾರಗಡಿಗೆ ಎಂಬಲ್ಲಿ ನಡೆದಿದೆ.
ಮಡಿಕೇರಿಯಿಂದ ಸೂರ್ಲಬ್ಬಿ ಮಾರ್ಗವಾಗಿ ಸೋಮವಾರಪೇಟೆಗೆ ತೆರಳುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ಕುಂಬಾರಗಡಿಗೆ ಗ್ರಾಮದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಢಿಕ್ಕಿಯಾಗಿದೆ. ಬಸ್ ನಲ್ಲಿ ಹೆಚ್ಚಾಗಿ ಶಾಲಾ ಮಕ್ಕಳೆ ಪ್ರಯಾಣಿಸುತ್ತಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬಸ್ ಮರಕ್ಕೆ ಢಿಕ್ಕಿಯಾಗದೆ ಮುಂದೆ ಚಲಿಸಿದಲ್ಲಿ 50 ಅಡಿ ಪ್ರಪಾತಕ್ಕೆ ಉರುಳಿ ಬೀಳುವ ಆತಂಕ ಎದುರಾಗಿತ್ತು. ಸೂರ್ಲಬ್ಬಿ ರಸ್ತೆ ಕಿರಿದಾಗಿದ್ದು, ಹೆಚ್ಚು ತಿರುವುಗಳೆ ಹೊಂದಿಕೊಂಡಿದೆ. ಇಲ್ಲಿ ಯಾವುದೇ ನಾಮಫಲಕ ಇಲ್ಲದಿರುವುದೇ ಅಪಘಾತಕ್ಕೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ನಾಮಫಲಕ ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.