ಮುಡಾ ಹಗರಣದಲ್ಲಿ ಸಿದ್ದರಾಮಯ್ಯರಿಗೆ ತಪ್ಪಿನ ಅರಿವಿಲ್ಲ: ಎಚ್.ಡಿ. ಕುಮಾರಸ್ವಾಮಿ

Update: 2024-08-26 17:14 GMT

ಮಂಡ್ಯ: ಮುಡಾ ನಿವೇಶನ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸಗಿರುವ ತಪ್ಪಿನ ಅರಿವು ಅವರಿಗಿಲ್ಲ. ಮೊದಲು ವೈಟ್ನರ್ ಹಚ್ಚಲಾಯಿತು. ಇವತ್ತು ಅದಕ್ಕೆ ಟಾರ್ಚ್ ಬಿಟ್ಟು ತೋರಿಸುವ ವ್ಯರ್ಥ ಪ್ರಯತ್ನ ನಡೆಸಲಾಯಿತು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

ನಗರದಲ್ಲಿ ಸೋಮವಾರ ದಿಶಾ ಸಭೆಯ ನಂತರ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ಜಾಗ ಅವರ ಪತ್ನಿದಾ? ಬಾಮೈದನದಾ? ಮೊದಲು ಜಾಗ ಯಾರದ್ದು ಹೇಳಲಿ. ಸುಳ್ಳು ದಾಖಲೆ ಸೃಷ್ಟಿಸಿ ಸರಕಾರಿ ಜಾಗ ಲಪಟಾಯಿಸಿದ್ದಾರೆ. ಸರಕಾರದ 67 ಕೋಟಿ ರೂ. ಲೂಟಿ ಮಾಡಿದ್ದಾರೆ. ಈಗ ದಾಖಲೆಗಳಿಗೆ ಟಾರ್ಚ್ ಬಿಟ್ಟು ನೋಡುತ್ತಿದ್ದಾರೆ. ಈ ಪರಿಸ್ಥಿತಿ ಅವರಿಗೆ ಬೇಕಿತ್ತಾ? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ನನ್ನ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆ ಇಟ್ಟುಕೊಂಡು ಏನೇನು ನಡೆಸುತ್ತಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ನಾನೂ ಸಿದ್ಧನಿದ್ದೇನೆ, ಏನು ಬೇಕಾದರೂ ಮಾಡಲಿ. ನಾನು ಜೈಲಿಗೆ ಹೋಗುವಂತದ್ದು ಏನು ಮಾಡಿಲ್ಲ. ನೂರುಜನ್ಮ ಎತ್ತಿ ಬಂದರೂ ನನ್ನನ್ನು ಏನು ಮಾಡಲು ಆಗಲ್ಲ ಎಂದು ಅವರು ಹೇಳಿದರು.

ಜಂತಕಲ್ ಗಣಿಗಾರಿಕೆಯ ಗುತ್ತಿಗೆಗೆ ಸಂಬಂಧಿಸಿದ ಸಾಯಿ ವೆಂಕಟೇಶ್ವರ ಪ್ರಕರಣ ಯಾವತ್ತೊ ಸತ್ತಿರುವ ಪ್ರಕರಣ. ಅದರಲ್ಲಿ ನನ್ನ ಪಾತ್ರ ಏನಿದೆ ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ದೂರಿದರು.

ಆಪರೇಷನ್ ಕಮಲ ನಡೆಸಲು ಶಾಸಕರಿಗೆ ತಲಾ 100 ಕೋಟಿ ರೂ. ಆಮಿಷವೊಡ್ಡಲಾಗಿದೆ ಎಂಬ ಶಾಸಕ ರವಿಕುಮಾರ್ ಗಣಿಗ ಆರೋಪಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನೂರು ಕೋಟಿಗೆ ಎಷ್ಟು ಸಂಖ್ಯೆ ಇದೆ ಎಂದು ಗೊತ್ತಿದೆಯಾ ಅವರಿಗೆ? ಸರಕಾರ ತೆಗೆಯುವುದಕ್ಕೆ 5,000 ಕೋಟಿ ಖರ್ಚು ಮಾಡುತ್ತಾರೆ ಎಂದರೆ ಯಾರಾದರೂ ನಂಬುತ್ತಾರೆಯೇ? ಎಂದರು.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕಣದಲ್ಲಿ ಇರುತ್ತಾರೆ. ಜೆಡಿಎಸ್‍ನಲ್ಲೂ ಸಮರ್ಥ ಕಾರ್ಯಕರ್ತರಿದ್ದಾರೆ. ಅಭ್ಯರ್ಥಿ ಆಯ್ಕೆ ವಿಚಾರ ಇನ್ನೂ ಚರ್ಚೆ ಆಗಿಲ್ಲ. ಒಟ್ಟಾರೆ ಎನ್‍ಡಿಎ ಅಭ್ಯರ್ಥಿ ಕಣದಲ್ಲಿರುತ್ತಾರೆ ಎಂದು ಅವರು ಸ್ಪಷ್ಟಪಡಿಸಿದರು.

ನಾನು ಜನರ ಕೆಲಸ ಮಾಡಲು ಬಂದಿದ್ದೇನೆಯೇ ವಿನಃ ರಾಜಕೀಯ ಮಾಡುವುದಕ್ಕಲ್ಲ. ಕಾಂಗ್ರೆಸ್ ಸಚಿವರು, ಶಾಸಕರು ದಿಶಾ ಸಭೆಗೆ ಗೈರಾಗಿರುವುದು ನನಗೆ ಸಂಬಂಧಿಸಿದ್ದಲ್ಲ. ಕೇಂದ್ರ ಮಂತ್ರಿಯಾಗಿ ಏನೆಲ್ಲಾ ಮಾಡಬೇಕೋ ಅಷ್ಟನ್ನು ಮಾಡುತ್ತೇನೆ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News