ಕುಮಾರಸ್ವಾಮಿಯವರೇ, ದಯವಿಟ್ಟು ನೀವು 'ಹತಾಶ ಸ್ವಾಮಿ'ಯಂತೆ ಆಡಬೇಡಿ: ದಿನೇಶ್‌ ಗುಂಡೂರಾವ್

Update: 2024-08-23 05:24 GMT

ಬೆಂಗಳೂರು: ಸಾಯಿ ವೆಂಕಟೇಶ್ವರ ಮಿನರಲ್ಸ್ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಯಲ್ಲಿ ನನ್ನ ಸಹಿ ಪೋರ್ಜರಿ ಮಾಡಲಾಗಿದೆ ಎಂಬ ಕೇಂದ್ರ ಸಚಿವ ಕುಮಾರ ಸ್ವಾಮಿ ಅವರ ಹೇಳಿಕೆಗೆ ರಾಜ್ಯ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ತಿರುಗೇಟು ನೀಡಿದ್ದಾರೆ.

 ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿರುವ ಅವರು,  ಮಾನ್ಯ ಕುಮಾರಸ್ವಾಮಿಯವರೇ, ದಯವಿಟ್ಟು ನೀವು 'ಹತಾಶ ಸ್ವಾಮಿ'ಯಂತೆ ಆಡಬೇಡಿ. 2007 ರಲ್ಲಿ ಮುಖ್ಯಮಂತ್ರಿಯಾಗಿದ್ದ ಮಾನ್ಯರು ತಾವೇ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ಮುಖ್ಯಮಂತ್ರಿಗಳ ಮುಂದೆ ಸಾವಿರಾರು ಕಡತಗಳು ಬರುತ್ತವೆ, ಅವೆಲ್ಲವನ್ನೂ ಗಮನಿಸಲು ಸಾಧ್ಯವಿಲ್ಲ ಎಂಬ ನಿಮ್ಮ ಹೇಳಿಕೆ ಸಾಂದರ್ಭಿಕ ಸಮರ್ಥನೆಯೂ ಆಗಲು ಯೋಗ್ಯತೆಯಿಲ್ಲ. ಅದು 'ನಕಲಿ ಶಾಮ'ರೆನಿಸಿಕೊಂಡವರು ಮಾಡುವ ಪಲಾಯನದ ಸಮರ್ಥನೆಯಷ್ಟೆ ಕುಟುಕಿದ್ದಾರೆ.

2007ರ ಅಕ್ಟೋಬರ್ 10 ರಂದು ಸಾಯಿ ವೆಂಕಟೇಶ್ವರ ಮಿನರಲ್ಸ್ ಗೆ ಸಂಬಂಧಿಸಿದ ಕಡತ ಅಂದಿನ ನಿಮ್ಮ ಕಾರ್ಯದರ್ಶಿ ಡಿ.ವಿ.ಪ್ರಸಾದ್ರವರಿಗೆ ಬರುತ್ತದೆ. ಅಂದೇ ಆ ಕಡತ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಕಾರ್ಯದರ್ಶಿಯ ಅವಗಾಹನೆಗೆ ಹೋಗುತ್ತದೆ. ಅದ್ಯಾವ ಮಾಯೆಯೋ ಏನೋ ವಾಣಿಜ್ಯ ಇಲಾಖೆಯಿಂದ ಕ್ಲಿಯರೆನ್ಸ್ ಪಡೆದುಕೊಂಡ ಆ ಕಡತ ಅಂದೇ ನಿಮ್ಮ ಸಮಕ್ಷಮಕ್ಕೆ ತಲುಪುತ್ತದೆ. ಆ ಕಡತಕ್ಕೆ ತಾವೇ ಸಹಿ ಹಾಕಿ ನೋಂದಣಿಯೇ ಆಗದ ಸಾಯಿ ವೆಂಕಟೇಶ್ವರ ಮಿನರಲ್ಸ್ ಕಂಪನಿಗೆ 550 ಎಕರೆ ಭೂಮಿ ಕೂಡ ಮಂಜೂರಾಗುತ್ತದೆ. ಆದರೆ 18 ವರ್ಷಗಳ ಬಳಿಕ ಆ ಸಹಿಯೇ ನನ್ನದಲ್ಲ., ನನ್ನ ಸಹಿ ಫೋರ್ಜರಿ ಆಗಿದೆ ಎಂದು ಈಗ ನೀವು ಹೇಳುತ್ತಿರುವುದು ಯಾವ 'ನಕಲಿ ಶಾಮ'ನ ಮುಖವಾಡ ಕುಮಾರಸ್ವಾಮಿಯವರೆ.? ಎಂದು ಪ್ರಶ್ನಿಸಿದ್ದಾರೆ.

ಮಾನ್ಯ ಕುಮಾರಸ್ವಾಮಿಯವರೆ, ಮುಖ್ಯಮಂತ್ರಿಗಳಾಗಿದ್ದವರ ಸಹಿಯೇ ಫೋರ್ಜರಿಯಾಗುವುದನ್ನು ಪ್ರಪಂಚದ ಎಂಟನೇ ಅದ್ಭುತ ಎಂದು ಭಾವಿಸಬೇಕೆ.? ಅಥವಾ ನಿಮ್ಮ ಆಡಳಿತದಲ್ಲಿ ನಿಮ್ಮ ಸಹಿಯನ್ನೇ ಫೋರ್ಜರಿ ಮಾಡುವಷ್ಟು ಅರಾಜಕತೆಯ ಆಡಳಿತ ನಿಮ್ಮದಾಗಿತ್ತು ಎಂದು ಭಾವಿಸಬೇಕೆ ಎಂಬುದನ್ನು ದಯವಿಟ್ಟು ಹೇಳಿಬಿಡಿ. ಎಲ್ಲಾದರೂ ಮುಖ್ಯಮಂತ್ರಿಗಳ ಸಹಿ ಫೋರ್ಜರಿ ಆಗಲು ಸಾಧ್ಯವೇ.? ಈಗ ಹೇಳಿ ನಿಮ್ಮನ್ನು 'ನಕಲಿ ಶಾಮ' ಎನ್ನದೆ ಬೇರೇನು ಹೇಳಬೇಕು.? ಎಂದು ವ್ಯಂಗ್ಯವಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News