ಕುಮಾರಸ್ವಾಮಿ ಆಸ್ತಿ ಮೌಲ್ಯ 219 ಕೋಟಿ ರೂ.; ಮಾಜಿ ಸಿಎಂ ಬಳಿ ಸ್ವಂತ ಕಾರು ಇಲ್ಲ!

Update: 2024-04-04 18:19 GMT

ಮಂಡ್ಯ: ಮಂಡ್ಯ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದ ಎಚ್.ಡಿ.ಕುಮಾರಸ್ವಾಮಿ ಪ್ರಮಾಣ ಪತ್ರದಲ್ಲಿ ಒಟ್ಟು 219 ಕೋಟಿ ರೂ.ಆಸ್ತಿ ಘೋಷಣೆ ಮಾಡಿಕೊಂಡಿದ್ದು, ಚರಾಸ್ತಿ, ಸ್ಥಿರಾಸ್ತಿ ಎರಡರಲ್ಲೂ ಕುಮಾರಸ್ವಾಮಿಗಿಂತ ಪತ್ನಿ ಅನಿತಾ ಕುಮಾರಸ್ವಾಮಿ ಹೆಚ್ಚು ಶ್ರೀಮಂತರಾಗಿದ್ದಾರೆ.

ಕುಮಾರಸ್ವಾಮಿ ಬಳಿ 10.41 ಕೋಟಿ ರೂ. ಹಾಗೂ ಅನಿತಾ ಅವರ ಬಳಿ 90.32 ಕೋಟಿ ರೂ. ಚರಾಸ್ತಿ ಇದೆ. ಕುಮಾರಸ್ವಾಮಿ ಅವರ ಹಿಂದೂ ಅವಿಭಕ್ತ ಕುಟುಂಬದ ಆಸ್ತಿಯಾಗಿ 1.20 ಕೋಟಿ ರೂ. ಚರಾಸ್ತಿ ಬಂದಿದೆ. ಒಟ್ಟಾರೆ 102.23 ಕೋಟಿ ರೂ. ಮೌಲ್ಯದ ಚರಾಸ್ತಿ ಇದೆ. ಕುಮಾರಸ್ವಾಮಿ ಬಳಿ 44 ಕೋಟಿ ರೂ. ಹಾಗೂ ಅನಿತಾ ಅವರ ಬಳಿ 64 ರೂ. ಕೋಟಿ ಸ್ಥಿರಾಸ್ತಿ ಇದೆ. ಅವಿಭಕ್ತ ಕುಟುಂಬದ ಆಸ್ತಿಯಾಗಿ 7 ಕೋಟಿ ರೂ. ಬಂದಿದೆ. ಒಟ್ಟಾರೆ ಸ್ಥಿರಾಸ್ತಿ ಮೌಲ್ಯ 115 ಕೋಟಿ ರೂ. ಇದೆ.

ಕುಮಾರಸ್ವಾಮಿ ಅವರ ಕೈಯಲ್ಲಿ 10.38 ಲಕ್ಷ ರೂ. ನಗದು ಇದ್ದರೆ, ಅನಿತಾ ಅವರಲ್ಲಿ 10.77 ಲಕ್ಷ ರೂ. ನಗದು ಇದೆ. ಅನಿತಾ ನಿರ್ವಹಣೆ ಮಾಡುವ ನಿಖಿಲ್ ಮತ್ತು ಕಂಪನಿ ಖಾತೆಯಲ್ಲಿ 66.14 ಲಕ್ಷ ರೂ. ನಗದು ಇದೆ. ಕುಮಾರಸ್ವಾಮಿ ಅವರಿಗೆ 19 ಕೋಟಿ ರೂ. ಸಾಲ ಇದ್ದರೆ, ಅನಿತಾ 63 ಕೋಟಿ ರೂ. ಸಾಲ ಮಾಡಿ, ಸಾಲದಲ್ಲೂ ಪತಿಗಿಂತ ಮುಂದಿದ್ದಾರೆ.

ಕುಮಾರಸ್ವಾಮಿ ಬಳಿ 12 ಲಕ್ಷ ರೂ. ಮೌಲ್ಯದ ಒಂದು ಟ್ರ್ಯಾಕ್ಟರ್, 6.40 ಲಕ್ಷ ರೂ. ಮೌಲ್ಯದ 20 ಹಸು, 6.14 ಲಕ್ಷ ರೂ. ಮೌಲ್ಯದ ಬನ್ನೂರು ಕುರಿಗಳಿವೆ. ಆದರೆ, ಸ್ವಂತ ಕಾರು ಇಲ್ಲ. ಅನಿತಾ ಅವರಲ್ಲಿ 11 ಲಕ್ಷ ಮೌಲ್ಯದ ಇನ್ನೊವಾ ಕಾರು ಇದೆ.

ಕುಮಾರಸ್ವಾಮಿ 47 ಲಕ್ಷ ರೂ. ಮೌಲ್ಯದ 750 ಗ್ರಾಂ ಚಿನ್ನ, 10 ಲಕ್ಷ ಮೌಲ್ಯದ 12 ಕೆ.ಜಿ ಬೆಳ್ಳಿ, 2.60 ಲಕ್ಷ ಮೌಲ್ಯದ 4 ಕ್ಯಾರೆಟ್ ವಜ್ರಾಭರಣವಿದೆ. ಅನಿತಾ ಅವರು 2.42 ಕೋಟಿ ಮೌಲ್ಯದ 3.85 ಕೆ.ಜಿ ಚಿನ್ನಾಭರಣ, 13 ಲಕ್ಷದ 17 ಕೆ.ಜಿ ಬೆಳ್ಳಿ, 33 ಲಕ್ಷ ರೂ.ನ 51 ಕ್ಯಾರೆಟ್ ವಜ್ರಾಭರಣ ಹೊಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News