ಆನೇಕಲ್ | ಸಬ್ಸಿಡಿ ಸಾಲ ನೀಡುವುದಾಗಿ ನಕಲಿ ಟ್ರಸ್ಟ್ ಹೆಸರಲ್ಲಿ ಲಕ್ಷಾಂತರ ರೂ. ವಂಚನೆ: ಪ್ರಕರಣ ದಾಖಲು
ಆನೇಕಲ್, ಫೆ.9: ಮಹಿಳೆಯೊಬ್ಬಳ ನೇತೃತ್ವದ ತಂಡವೊಂದು ನಕಲಿ ಟ್ರಸ್ಟ್ ರಚಿಸಿ ಸಬ್ಸಿಡಿ ಸಾಲ ನೀಡುವುದಾಗಿ ನಂಬಿಸಿ ಹಲವರಿಗೆ ಲಕ್ಷಾಂತರ ರೂ. ವಂಚಿಸಿರುವ ಪ್ರಕರಣ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನಲ್ಲಿ ನಡೆದಿದ್ದು, ಈ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ಮೂಲದ ಪವಿತ್ರಾ, ಪ್ರವೀಣ್, ಯಲ್ಲಪ್ಪ, ಶೀಲ, ರುಕ್ಮಿಣಿ, ರಾಧ, ಮಮತಾ, ನೆಹರೂಜಿ, ಶರತ್ ಕುಮಾರ್, ಸತೀಶ್, ಮಂಜುಳಾ, ಆಲ್ಬರ್ಟ್ ಮಾರ್ಟಿನ್, ಹೇಮಲತಾ ಹಾಗೂ ಶಾಲಿನಿ ಎಂಬವರು ಆರೋಪಿಗಳೆನ್ನಲಾಗಿದೆ. ಆರೋಪಿಗಳು ಬ್ಲೂ ವಿಂಗ್ಸ್ ಎಂಬ ಹೆಸರಿನ ಟ್ರಸ್ಟ್ ಮಾಡಿಕೊಂಡು ಸಬ್ಸಿಡಿ ಸಾಲದ ಆಮಿಷವೊಡ್ಡಿ ಅಮಾಯಕರಿಗೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
ತಮ್ಮ ಕೆಲಸಕ್ಕಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೆಸರು ದುರ್ಬಳಕೆ ಮಾಡಿಕೊಂಡಿರುವ ಇವರು, ನಮ್ಮ ಟ್ರಸ್ಟ್ ಗೆ ಕೇಂದ್ರ ಸರಕಾರದಿಂದ ಹಣ ಬಂದಿದೆ. ತಮ್ಮ ಟ್ರಸ್ಟ್ ಗೆ ನಿರ್ಮಲಾ ಸೀತಾರಾಮನ್ 17,000 ಕೋಟಿ ವರ್ಗಾವಣೆ ಮಾಡಿಸಿದ್ದಾರೆ. ಈ ಹಣವನ್ನು ಟ್ರಸ್ಟ್ ಮೂಲಕ ಸಬ್ಸಿಡಿಯಲ್ಲಿ ಸಾಲ ವಿತರಿಸುತ್ತೇವೆ. ಅಮೆರಿಕದಿಂದಲೂ ನಮ್ಮ ಟ್ರಸ್ಟ್ ಗೆ ಹಣ ಸಂದಾಯ ಆಗಿದೆ. ಆ ಹಣವನ್ನು ನಾವು ಲೋನ್ ಮೂಲಕ ನಿಮಗೆ ಕೊಡುತ್ತೇವೆ. 10 ಲಕ್ಷ ರೂ. ಸಾಲ ಪಡೆದರೆ ಐದು ಲಕ್ಷ ರೂ. ಮಾತ್ರ ವಾಪಸ್ ಕಟ್ಟಿದರೆ ಸಾಕು. 5 ಲಕ್ಷ ರೂ. ನಿಮಗೆ ಸಬ್ಸಿಡಿಯಾಗಿ ಸಿಗುತ್ತದೆ. ಆದರೆ ನೀವು ಲೋನ್ ಪಡೆಯಬೇಕು ಅಂದರೆ ಮುಂಚಿತವಾಗಿ ಹಣ ಕಟ್ಟಬೇಕು ಎಂದು ನಂಬಿಸಿ ಹಲವರಿಂದ ಹಣ ಪಡೆದು ವಂಚಿಸಿದ್ದಾರೆ ಎಂದು ದೂರಲಾಗಿದೆ.
ಮಹಿಳೆಯರನ್ನು ಕೇಂದ್ರೀಕರಿಸಿ ಕಾರ್ಯಾಚರಿಸಿದ ವಂಚಕರ ತಂಡ ನೂರಾರು ಮಹಿಳೆಯರಿಂದ ಈ ರೀತಿ ಹಣ ವಸೂಲಿ ಮಾಡಿದೆ. 2019 ರಿಂದ ನಿರಂತರವಾಗಿ ಐದು ಸಾವಿರದಿಂದ ಇಪ್ಪತ್ತೈದು ಸಾವಿರ ರೂ.ವರೆಗೆ ಮಹಿಳೆಯರು ಈ ಟ್ರಸ್ಟ್ ಗೆ ಹಣ ಕಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಆನೇಕಲ್, ಚಂದಾಪುರ, ಸೂರ್ಯ ನಗರ ,ಹೊಸಕೋಟೆ ಅತ್ತಿಬೆಲೆಯಲ್ಲಿ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳ ವಿರುದ್ಧ ಸೂರ್ಯನಗರ, ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.