ಜೆಡಿಎಸ್ ವಿಪಕ್ಷದಲ್ಲಿ ಗೌರವಯುತ ಕೆಲಸ ಮಾಡಲಿ: ಸಚಿವ ದಿನೇಶ್ ಗುಂಡೂರಾವ್

Update: 2023-12-11 14:20 GMT

ಬೆಳಗಾವಿ: ಜೆಡಿಎಸ್ ಪಕ್ಷವನ್ನು ಜನ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲಿಸಿದ್ದಾರೆ. ಅವರು ವಿರೋಧ ಪಕ್ಷದಲ್ಲಿ ಕೂತು ಗೌರವಯುತವಾಗಿ ಜನರ ಕೆಲಸ ಮಾಡಲಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಕಾಂಗ್ರೆಸ್‍ನ ಪ್ರಭಾವಿ ಸಚಿವರೊಬ್ಬರು 50-60 ಶಾಸಕರನ್ನು ಕರೆದುಕೊಂಡು ಬಿಜೆಪಿಗೆ ಶರಣಾಗತಿ ಆಗಲಿದ್ದಾರೆ ಎಂದು ಕುಮಾರಸ್ವಾಮಿ ನೀಡಿರುವ ಹೇಳಿಕೆ ಕುರಿತು ಸೋಮವಾರ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.

ರಾಜ್ಯದ ಜನ ಕಾಂಗ್ರೆಸ್ ಗೆ ಆಶೀರ್ವಾದ ಮಾಡಿದ್ದಾರೆ. ಅಧಿಕಾರಕ್ಕಾಗಿ  ಕುಮಾರಸ್ವಾಮಿ ಈ ರೀತಿ ವರ್ತಿಸುವುದು ಅವರಿಗೆ ಶೋಭೆ ತರಲ್ಲ. ಸರಕಾರ ಪತನ ಮಾಡಬೇಕು ಎಂಬುದುದೇ  ಅವರ ರಾಜಕಾರಣ ಆದರೆ ಏನು ಹೇಳಬೇಕು  ಎಂದು ತಿಳಿಯುತ್ತಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ನಮ್ಮ ಸರಕಾರ 5 ವರ್ಷ ಪೂರೈಸಲಿದೆ. ಜನರ ತೀರ್ಪು ಗೌರವಿಸಬೇಕು. ಯಾವುದೇ ಸರಕಾರದಲ್ಲಿ ಸಣ್ಣ ಪುಟ್ಟ ಸಮಸ್ಯೆ ಇರುತ್ತದೆ. ಅದಕ್ಕೆ ಕಾದು, ಸರಕಾರ ಬೀಳಿಸುವುದು ಒಂದೇ ಉದ್ದೇಶ ಎಂದು ಕುಳಿತರೆ ರಾಜಕಾರಣ ಅಷ್ಟೇನಾ? ವಿರೋಧ ಪಕ್ಷದ ಜವಾಬ್ದಾರಿಯನ್ನು ಅವರು ನಿಭಾಯಿಸಲಿ. ಅದನ್ನು ಬಿಟ್ಟು ಈ ರೀತಿ ಮಾಡುವುದು ಪ್ರಜಾಪ್ರಭುತ್ವಕ್ಕೆ ಶೋಭೆ ತರಲ್ಲ ಎಂದು ಅವರು ಹೇಳಿದರು.

ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಹೊಗಳಿರುವ ಕುಮಾರಸ್ವಾಮಿ ನಡೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಅದು ಕುಮಾರಸ್ವಾಮಿಯವರ ವೈಯಕ್ತಿಕ ರಾಜಕಾರಣ, ಅವರಿಗೆ ಅನಿವಾರ್ಯ ಆಗಿರಬಹುದು. ಶಕ್ತಿ ಕಡಿಮೆಯಾಗಿದೆ, ಅದನ್ನು ವೃದ್ಧಿಗೊಳಿಸಲು ಹೀಗೆ ಮಾಡಿರಬಹುದು’ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News