ಯತ್ನಾಳ್ ಕೋವಿಡ್ ಭ್ರಷ್ಟಾಚಾರದ ದಾಖಲೆಗಳನ್ನು ತನಿಖಾ ಆಯೋಗಕ್ಕೆ ನೀಡಲಿ: ದಿನೇಶ್ ಗುಂಡೂರಾವ್

Update: 2023-12-27 17:56 GMT

ಬೆಂಗಳೂರು: ಬಿಜೆಪಿ ಸರಕಾರದ ಅವಧಿಯಲ್ಲಿ 40 ಸಾವಿರ ಕೋಟಿ ರೂ.ಗಳ ಕೋವಿಡ್ ಹಗರಣ ನಡೆದಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೇವಲ ಬಾಯಿ ಮಾತಲ್ಲಿ ಹೇಳಿದರೆ ಸಾಲದು. ತಮ್ಮ ಬಳಿ ಇರುವ ಮಾಹಿತಿ ಹಾಗೂ ದಾಖಲೆಗಳನ್ನು ನ್ಯಾ. ಕುನ್ನಾ ಅವರ ತನಿಖಾ ಆಯೋಗಕ್ಕೆ ನೀಡಲಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಹೇಳುತ್ತಿರುವುದರಲ್ಲಿ ಸತ್ಯ ಇದೆ. ಬಿಜೆಪಿ ಪಕ್ಷದ ಶಾಸಕರಾಗಿ ಆ ಪಕ್ಷದ ನಾಯಕರ ಮೇಲೆ ಯತ್ನಾಳ್ 40 ಸಾವಿರ ಕೋಟಿ ರೂ.ಅಕ್ರಮ ನಡೆದಿರುವ ಬಗ್ಗೆ ಆರೋಪ ಮಾಡಿದ್ದಾರೆ. ಆದರೆ ಬಿಜೆಪಿ ನಾಯಕರು ಯಾರು ಅವರಿಗೆ ಒಂದು ನೋಟಿಸ್ ನೀಡಿಲ್ಲ. ಶಿಸ್ತು ಕ್ರಮ ಜರುಗಿಸುವ ಧೈರ್ಯವು ಇಲ್ಲ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಭ್ರಷ್ಟಾಚಾರದ ಕೆಲವು ದಾಖಲೆಗಳು ಯತ್ನಾಳ್ ಬಳಿ ಇರಬಹುದು. ಹೀಗಾಗಿ ಯತ್ನಾಳ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಯತ್ನಾಳ್ ಅವರ ರೀತಿಯಲ್ಲಿ ಬೇರೆ ಯಾವುದೆ ಪಕ್ಷದಲ್ಲಿ ಹೇಳಿಕೆಗಳನ್ನ ನೀಡಿದ್ದರೆ, ನೋಟಿಸ್ ನೀಡಿ ಶಿಸ್ತು ಕ್ರಮ ಜರುಗಿಸಲಾಗುತ್ತಿತ್ತು ಎಂದು ಅವರು ಹೇಳಿದರು.

ಯಡಿಯೂರಪ್ಪ ಸಿಎಂ ಆಗಿದ್ದಾಗ ಎಲ್ಲವನ್ನ ನೋಡಿಕೊಳ್ಳುತ್ತಿದ್ದದ್ದು ವಿಜಯೇಂದ್ರ. ಭ್ರಷ್ಟಾಚಾರದ ಬಗ್ಗೆ ಝೀರೊ ಟಾಲರೆನ್ಸ್(ಶೂನ್ಯ ಸಹಿಷ್ಣುತೆ) ಎನ್ನುವ ಪ್ರಧಾನಿ ಮೋದಿ ಸುಮ್ಮನಿರೋದು ಏಕೆ ?. ತಮ್ಮದೇ ಪಕ್ಷದ ಶಾಸಕ 40 ಸಾವಿರ ಕೋಟಿ ರೂ.ಅಕ್ರಮದ ಆರೋಪ ಮಾಡಿದರೂ ಮೌನವಾಗಿದ್ದಾರೆ. ಭ್ರಷ್ಟಾಚಾರದಲ್ಲಿ ಪಾಲು ಕೇಂದ್ರಕ್ಕೂ ತಲುಪಿದೆಯಾ? ಭ್ರಷ್ಟಾಚಾರದ ಪಾಲು ಕೇಂದ್ರಕ್ಕೆ ಮುಟ್ಟಿರುವ ಹಿನ್ನೆಲೆಯಲ್ಲೆ ವಿಜಯೇಂದ್ರ ಅವರನ್ನ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ ಎಂಬ ಮಾತುಗಳಿವೆ ಎಂದು ಅವರು ಹೇಳಿದರು.

ಮೊದಲ ಬಾರಿ ಶಾಸಕರಾದವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಿದೆ. ಅವರ ಮೇಲೆಯೆ ಅವರ ಪಕ್ಷದ ಶಾಸಕ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಈ.ಡಿ, ಐಟಿ, ಸಿಬಿಐ ತನಿಖಾ ಸಂಸ್ಥೆಗಳು ಇಂಥಹ ವಿಚಾರಗಳು ಬಂದಾಗ ಯಾವುದೆ ತನಿಖೆಗಳನ್ನ ಕೈಗೊಳ್ಳಲ್ಲ. ಇದೇ ಕಾಂಗ್ರೆಸ್ ನಾಯಕರ ಮೇಲೆ ಆರೋಪಗಳು ಬಂದಿದ್ದರೆ ಇಷ್ಟರೊಳಗೆ ಐಟಿ ದಾಳಿಗಳು ನಡೆದಿದ್ದವು. ಕೇಂದ್ರ ತನಿಖಾ ಸಂಸ್ಥೆಗಳು ಬಿಜೆಪಿ ಕೈಗೊಂಬೆಯಾಗಿ ಕೆಲಸ ಮಾಡುತ್ತಿವೆ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದರು.

ನ್ಯಾ.ಕುನ್ನಾ ಅವರ ತನಿಖಾ ಆಯೋಗ ಸ್ವಯಂ ಪ್ರೇರಿತವಾಗಿ ಯತ್ನಾಳ್ ಅವರಿಂದ ಮಾಹಿತಿ ಪಡೆಯಬಹುದು. ಅಥವಾ ಯತ್ನಾಳ್ ತಮ್ಮ ಬಳಿ ಇರುವ ಮಾಹಿತಿಗಳನ್ನ ಸರಕಾರಕ್ಕೆ ಸಲ್ಲಿಸಿದರೆ ಅದನ್ನ ತನಿಖಾ ಆಯೋಗಕ್ಕೆ ಸರಕಾರವೆ ಸಲ್ಲಿಸಲಿದೆ. 40 ಸಾವಿರ ಕೋಟಿ ರೂ.ಭ್ರಷ್ಟಾಚಾರದ ಬಗ್ಗೆ ಮಾತಾಡಿರುವ ಯತ್ನಾಳ್‍ಗೆ ಸರಕಾರದಿಂದ ನೋಟಿಸ್ ನೀಡಿ ಮಾಹಿತಿ ಒದಗಿಸುವಂತೆ ಕೇಳಲಾಗುವುದು ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News