ಅವೈಜ್ಞಾನಿಕ ‘ಶಕ್ತಿ' ಯೋಜನೆಯಿಂದ ಆಟೋ, ಕ್ಯಾಬ್ ಚಾಲಕರ ಜೀವನಕ್ಕೆ ಧಕ್ಕೆ: ಎಚ್.ಡಿ. ಕುಮಾರಸ್ವಾಮಿ

Update: 2023-09-11 16:38 GMT

ಎಚ್.ಡಿ. ಕುಮಾರಸ್ವಾಮಿ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳ ‘ಅಡ್ಡ ಪರಿಣಾಮ'ದ ತೀವ್ರತೆ ಜನರಿಗೆ ತಟ್ಟುತ್ತಿದೆ. ಸರಕಾರಿ ಸೌಲಭ್ಯಗಳ ಹಂಚಿಕೆಯಲ್ಲಿನ ಅಸಮಾನತೆ, ಪಕ್ಷಪಾತವು ಅರಾಜಕತೆ ಸೃಷ್ಟಿಸಿದೆ. ಅವೈಜ್ಞಾನಿಕ, ಅರೆಬೆಂದ ‘ಶಕ್ತಿ' ಯೋಜನೆಯ ಫಲವಾಗಿ ಇವತ್ತು ಖಾಸಗಿ ಸಂಚಾರ ವ್ಯವಸ್ಥೆ ಬುಡಮೇಲಾಗಿದೆ. ಬದುಕಿಗೆ ಗ್ಯಾರಂಟಿ ಕೊಡಿ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಸೋಮವಾರ ಈ ಸಂಬಂಧ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸಾಲ ಮಾಡಿ ಕ್ಯಾಬ್, ಆಟೋ ಓಡಿಸಿಕೊಂಡು ಬದುಕುತ್ತಿದ್ದವರು ಬೀದಿ ಪಾಲಾಗಿದ್ದಾರೆ. ನಿತ್ಯದ ಬದುಕು ಸಾಗಿಸುವುದೇ ದುಸ್ತರ ಎನ್ನುವ ಸ್ಥಿತಿಯಲ್ಲಿ ಅವರಿದ್ದಾರೆ. ಇನ್ನು, ಸರಕಾರಿ ಸಾರಿಗೆಯಷ್ಟೇ ಉತ್ತಮವಾಗಿ ಸೇವೆ ಒದಗಿಸುತ್ತಿರುವ ಖಾಸಗಿ ಬಸ್ ಜಾಲವನ್ನು ಸರಕಾರ ಹಾಳು ಮಾಡಿದೆ. ಅನೇಕರ ಬದುಕಿಗೆ ಗ್ಯಾರಂಟಿ ಇಲ್ಲದಂತೆ ಮಾಡಿದೆ ಎಂದು ಟೀಕಿಸಿದ್ದಾರೆ.

ಈ ಬಂದ್ ನಿಂದ ಸರಕಾರಿ ಸಾರಿಗೆಗೆ ಪರ್ಯಾಯವಾಗಿದ್ದ ಖಾಸಗಿ ಸಾರಿಗೆ ಜಾಲ ಸಂಪೂರ್ಣ ಸ್ಥಗಿತವಾಗಿದೆ. ಶಾಲಾ ಮಕ್ಕಳು, ಸಾರ್ವಜನಿಕರು, ವಿಮಾನ ನಿಲ್ದಾಣಕ್ಕೆ ತೆರಳುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಣ್ಣು, ತರಕಾರಿ ಸೇರಿ ಅಗತ್ಯ ವಸ್ತುಗಳ ಸಾಗಣೆಯಲ್ಲಿ ವ್ಯತ್ಯಯ ಆಗಿದೆ ಎಂದು ಅವರು ಹೇಳಿದ್ದಾರೆ.

ಸರಕಾರವು ಖಾಸಗಿ ಸಾರಿಗೆ ಒಕ್ಕೂಟದವರ ಬೇಡಿಕೆಗಳನ್ನು ಪ್ರತಿಷ್ಠ ಪಕ್ಕಕ್ಕಿಟ್ಟು ಮಾನವೀಯತೆಯಿಂದ ಪರಿಶೀಲಿಸಬೇಕು. ಅವರ ಬೇಡಿಕೆಗಳು ಈಡೇರಿಸಲಾಗದಂತಹ ಅಸಾಧ್ಯವಾದುದೇನಲ್ಲ. ಅವರಿಗೂ ಕುಟುಂಬಗಳಿವೆ, ತಂದೆತಾಯಿ, ಮಕ್ಕಳು ಇರುತ್ತಾರೆ ಎನ್ನುವುದನ್ನು ಸರಕಾರ ಮರೆಯಬಾರದು ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಹೋರಾಟ ಮಾಡುತ್ತಿರುವವರನ್ನು ಕಾಟಾಚಾರಕ್ಕೆ ಕರೆದು ಮಾತನಾಡುವುದಲ್ಲ. ವಾಸ್ತವತೆಗೆ ತಕ್ಕಂತೆ ಕಷ್ಟದಲ್ಲಿರುವ ಅವರಿಗೆ ನೆರವಾಗಬೇಕು. ನುಡಿದಂತೆಯೇ ನಡೆದು, ‘ಗ್ಯಾರಂಟಿ ಬಾಧಿತರ' ಬದುಕಿಗೆ ಪರಿಹಾರ ಒದಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News