ಸಾಹಿತಿಗಳಿಗೆ ಜೀವ ಬೆದರಿಕೆ ಪತ್ರ ಪ್ರಕರಣ: ಹಿಂಜಾವೇ ಸಂಚಾಲಕ ಸಿಸಿಬಿ ವಶಕ್ಕೆ
ಬೆಂಗಳೂರು, ಸೆ.30: ಸಾಹಿತಿಗಳಿಗೆ ಅನಾಮಧೇಯ ಪತ್ರದ ಮೂಲಕ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆಯ ‘ಹಿಂದೂ ಜಾಗರಣ ವೇದಿಕೆ’ಯ ಸಂಚಾಲಕನನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿರುವುದು ವರದಿಯಾಗಿದೆ.
ದಾವಣಗೆರೆ ಹಿಂದೂ ಜಾಗರಣ ವೇದಿಕೆಯ ಸಂಚಾಲಕ ಶಿವಾಜಿರಾವ್ ಜಾಧವ್ ಎಂಬಾತನನ್ನು ಸಿಸಿಬಿ ಪೊಲೀಸರು ಸೆ.29ರ ಮಧ್ಯರಾತ್ರಿ ವಶಕ್ಕೆ ಪಡೆದಿದ್ದು, ಆತನನ್ನು ದಾವಣಗೆರೆಯಿಂದ ಬೆಂಗಳೂರಿಗೆ ಕರೆ ತರಲಾಗಿದೆ. ಆರೋಪಿಯನ್ನು ಹತ್ತು ದಿನಗಳ ಕಾಲ ಸಿಸಿಬಿ ವಶಕ್ಕೆ ಪಡೆದು ವಿಚಾರಣೆ ಒಳಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ದಾವಣಗೆರೆಯಿಂದ ಪತ್ರಗಳು ಬರುತ್ತಿದ್ದ ಬಗ್ಗೆ ಮಾಹಿತಿ ದೊರಕಿದ ಹಿನ್ನೆಲೆ ಅಲ್ಲಿಯೇ ಆರೋಪಿಗಳಿಗಾಗಿ ಶೋಧ ನಡೆಸಲಾಗಿತ್ತು. ಈ ಸಂಬಂಧವಾಗಿ ಹಲವರ ವಿಚಾರಣೆ ಕೈಗೊಂಡು ಆ ಪೈಕಿ ಶಿವಾಜಿರಾವ್ ಜಾಧವ್ ಮೇಲೆ ಹೆಚ್ಚು ಅನುಮಾನ ಬಂದಿತ್ತು. ಈತನೇ ಕೃತ್ಯ ಎಸಗಿರುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ, ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಎರಡು ವರ್ಷಗಳಿಂದ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್, ಹಿರಿಯ ಸಾಹಿತಿಗಳಾದ ಕುಂ.ವೀರಭಧ್ರಪ್ಪ, ಕೆ.ಮರುಳಸಿದ್ದಪ್ಪ, ಡಾ.ಜಿ.ರಾಮಕೃಷ್ಣ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಡಾ.ಬಂಜಗೆರೆ ಜಯಪ್ರಕಾಶ್, ಕೆ.ಎಸ್.ವಿಮಲಾ, ಶ್ರೀಪಾದ ಭಟ್, ಸುರೇಂದ್ರ ರಾವ್ ಸೇರಿದಂತೆ ಹಲವು ಜನರಿಗೆ ಅನಾಮಧೇಯವಾಗಿ ಕೊಲೆ ಬೆದರಿಕೆ ಪತ್ರಗಳು ಬರುತ್ತಿದ್ದವು. ಇದರಿಂದ ಆತಂಕಗೊಂಡಿದ್ದ ಸಾಹಿತಿಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದರು. ನಂತರ, ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿತ್ತು.
ಬೆಂಗಳೂರು ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ಈ ಬಗ್ಗೆ ದಾಖಲಾಗಿದ್ದ ಪ್ರಕರಣಗಳ ತನಿಖೆ ಕೈಗೊಂಡಿದ್ದ ಸಿಸಿಬಿ ಎಸಿಪಿ ನೇತೃತ್ವದ ತಂಡ, ಇದೀಗ ಆರೋಪಿಯನ್ನು ವಶಕ್ಕೆ ಪಡೆದಿದೆ.