15ಕ್ಕೂ ಹೆಚ್ಚು ಸಾಹಿತಿಗಳಿಗೆ ಜೀವ ಬೆದರಿಕೆ ಪತ್ರ: ರಕ್ಷಣೆ ನೀಡುವಂತೆ ಡಿಜಿಪಿಗೆ ಗೃಹ ಸಚಿವ ಪರಮೇಶ್ವರ್ ಸೂಚನೆ
ಬೆಂಗಳೂರು: ಕರ್ನಾಟಕದ ಲೇಖಕರು ಹಾಗೂ ಸಾಹಿತಿಗಳು ಸೇರಿದಂತೆ ಒಟ್ಟು ಹದಿನೈದಕ್ಕೂ ಹೆಚ್ಚು ಹಿರಿಯ ಸಾಹಿತಿಗಳಿಗೆ ಜೀವ ಬೆದರಿಕೆ ಹಾಕಲಾಗಿದ್ದು, ಇದೀಗ ಬುದ್ಧಿಜೀವಿಗಳು ಜೀವ ಬೆದರಿಕೆ ಪತ್ರದ ಬಗ್ಗೆ ಸೂಕ್ತ ಕ್ರಮಕೈಗೊಳ್ಳಯವಂತೆ ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್, ʼʼಹಲವು ಲೇಖಕರು, ಬುದ್ಧಿಜೀವಿಗಳಿಗೆ ಜೀವ ಬೆದರಿಕೆ ಪತ್ರ ಬಂದಿರುವ ವಿಚಾರಕ್ಕೆ ಸಂಬಂಧಿಸಿ ಈಗಾಗಲೇ ನನ್ನ ಭೇಟಿಗೆ ಸಾಹಿತಿಗಳ ನಿಯೋಗ ಸಮಯ ಕೇಳಿದೆ. ಈ ಹಿಂದೆ ಹಲವು ಕಹಿ ಘಟನೆಗಳು ನಡೆದಿವೆ. ಸಾಹಿತಿ, ಬುದ್ಧಿಜೀವಿಗಳಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಡಿಜಿ-ಐಜಿಪಿ, ಬೆಂಗಳೂರು ಪೊಲೀಸ್ ಕಮಿಷನರ್ಗೆ ಸೂಚನೆ ನೀಡಿದ್ದೇನೆʼʼ ಎಂದು ತಿಳಿಸಿದರು.
ಸಾಹಿತಿಗಳ ಪತ್ರದಲ್ಲೇನಿದೆ?
ʼಕೋಮುವಾದ, ಜಾತಿವಾದ, ಮೌಡ್ಯವಿರೋಧಿ ನಿಲುವುಳ್ಳ ಸಾಹಿತಿಗಳು ಹಾಗೂ ಬುದ್ಧಿಜೀವಿಗಳಿಗೆ 2022ರ ಜೂನ್ ನಿಂದ ಪತ್ರದ ಮೂಲಕ ಜೀವ ಬೆದರಿಕೆ ಹಾಕಲಾಗಿದೆ. ಇದರಿಂದ , ಸಾಹಿತಿಗಳು ಹಾಗೂ ಬುದ್ಧಿಜೀವಿಗಳು ಮಾನಸಿಕ ಹಿಂಸೆಗೊಳಗಾಗಿದ್ದು, ಯಾವ ಸಂದರ್ಭದಲ್ಲಾದರೂ ತಮ್ಮ ಮೇಲೆ ದಾಳಿಯಾಗಬಹುದುʼ ಎಂದು ಗೃಹ ಸಚಿವರಿಗೆ ಬರೆದ ಪತ್ರದಲ್ಲಿ ಹಿರಿಯ ಸಾಹಿತಿ ಪ್ರೊ ಕೆ ಮರುಳಸಿದ್ದಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.
ʼʼಪ್ರೊ ಕೆ ಮರುಳಸಿದ್ದಪ್ಪ, ಪ್ರೊ ಎಸ್ ಜಿ ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ವಸುಂಧರಾ ಭೂಪತಿ, ಕುಂ ವಿರಭದ್ರಪ್ಪ ಸೇರಿದಂತೆ ಒಟ್ಟು 15 ಜನ ಲೇಖಕರು ಹಾಗೂ ಸಾಹಿತಿಗಳಿಗೆ ಬೆದರಿಕೆ ಪತ್ರ ಬಂದಿದೆ. ಈ ಬಗ್ಗೆ ಗಂಭಿರವಾಗಿ ಪರಿಗಣಿಸಿ ಸೂಕ್ತ ಕ್ರಮಕೈಗೊಳ್ಳಬೇಕುʼʼ ಎಂದು ಅವರು ಒತ್ತಾಯಿಸಿದ್ದಾರೆ.