ಕಾಂಗ್ರೆಸ್ ಪಕ್ಷದಲ್ಲಿಯೂ ಸಿಎಂ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಿದೆ: ವಿಜಯೇಂದ್ರ ವ್ಯಂಗ್ಯ

Update: 2024-09-06 14:50 GMT

ಬಿ.ವೈ.ವಿಜಯೇಂದ್ರ

ಬೆಂಗಳೂರು: ‘ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಾದ ಸಂದರ್ಭದಲ್ಲಿ ಬಂದು ನಿಂತಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಪಕ್ಷದಲ್ಲಿಯೂ ಸಿಎಂ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಲೇವಡಿ ಮಾಡಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರದ ಬೆದರಿಕೆಗಳು, ಬೆದರಿಕೆ ತಂತ್ರಗಳು, ಕುತಂತ್ರ ಇದ್ಯಾವುದಕ್ಕೂ ಕೂಡ ಭಯ ಪಡುವ ಪ್ರಶ್ನೆಯೇ ಇಲ್ಲ. ಸಿಎಂ ಮತ್ತು ಸಚಿವರ ಪರಿಸ್ಥಿತಿ ಸಹಜವಾಗಿಯೇ ನಮಗೆ ಅರ್ಥವಾಗುತ್ತಿದೆ. ಸಿಎಂ ರಾಜೀನಾಮೆ ಕೊಡಬೇಕಾದ ಸಂದರ್ಭ ಬಂದಿದ್ದು, ಅದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಇದಕ್ಕಾಗಿಯೇ ಪಿತೂರಿ ನಡೆದಿದೆ. ಸಂದರ್ಭ ಬಂದಾಗ ಅದಕ್ಕೆ ಸೂಕ್ತ ಉತ್ತರ ಕೊಡಲಿದ್ದೇವೆ ಎಂದು ತಿರುಗೇಟು ನೀಡಿದರು.

ಎತ್ತಿನಹೊಳೆ ಯೋಜನೆ: ಹಲವು ದಶಕಗಳಿಂದ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಭಾಗಕ್ಕೆ ನೀರು ಕೊಡುವ ಎತ್ತಿನಹೊಳೆ ಯೋಜನೆ ಆರಂಭದಲ್ಲಿ ಸುಮಾರು 8,500 ಕೋಟಿ ರೂ.ಯೋಜನಾ ವೆಚ್ಚ ಇದ್ದುದು, ಇದೀಗ ಅದು 20ರಿಂದ 22,500 ಕೋಟಿ ರೂ.ಗೆ ಏರಿದೆ. ಈ ಯೋಜನೆಗೆ ಚಾಲನೆ ನೀಡಿದ್ದು ಸಂತೋಷ. ಆದರೆ, ಅದರ ಮೂಲ ಉದ್ದೇಶ ಈಡೇರಲಿದೆಯೇ ಎಂಬ ಪ್ರಶ್ನೆ ಜನರಲ್ಲಿದೆ ಎಂದು ಅವರು ಪ್ರತಿಕ್ರಿಯಿಸಿದರು.

ಸಿಎಂ, ಡಿಸಿಎಂ ಕ್ರೆಡಿಟ್ ವಾರ್: ಮುಖ್ಯಮಂತ್ರಿ ಹೋಗುವ ಮುಂಚಿತವಾಗಿಯೇ ನಿನ್ನೆ ದಿನ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪೂಜೆ ಮಾಡಿದ್ದನ್ನು ಗಮನಿಸಿದ್ದೇನೆ. ಮುಖ್ಯಮಂತ್ರಿ ಸ್ಥಾನ ಅಲುಗಾಡುವ ಸಂದರ್ಭ ಇದಾಗಿದೆ. ಮುಖ್ಯಮಂತ್ರಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಿದೆ. ಡಿ.ಕೆ. ಶಿವಕುಮಾರ್ ಆ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಇರುವವರು ಎಂದು ವಿಶ್ಲೇಷಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News