ಲೋಕಸಭಾ ಚುನಾವಣೆ : 56 ಕೋಟಿ ರೂ.ಮೌಲ್ಯದ 1.14 ಲಕ್ಷ ಲೀಟರ್ ಮದ್ಯ ವಶ

Update: 2024-04-14 15:00 GMT
ಸಾಂದರ್ಭಿಕ ಚಿತ್ರ ( PTI)

ಬೆಂಗಳೂರು : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯವರು ಬೆಂಗಳೂರು, ಕೋಲಾರ ಹಾಗೂ ಬಾಗಲಕೋಟೆ ಸೇರಿದಂತೆ ಇನ್ನಿತರೆಡೆ ದಾಳಿ ನಡೆಸಿದ್ದು, ಸುಮಾರು 56 ಕೋಟಿ ರೂ.ಮೌಲ್ಯದ 1.14 ಲಕ್ಷ ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಮ್ಮಸಂದ್ರದಲ್ಲಿ 23.46 ಲಕ್ಷ ರೂ.ಮೌಲ್ಯದ 8970 ಲೀಟರ್ ಬಿಯರ್, ಕೆ.ಜಿ.ಹಳ್ಳಿಯಲ್ಲಿ 49.88 ಲಕ್ಷ ರೂ.ಮೌಲ್ಯದ 9108 ಲೀಟರ್ ಬಿಯರ್, ಕಾಡುಗೊಂಡನಹಳ್ಳಿಯಲ್ಲಿ 46.14 ಲಕ್ಷ ರೂ.ಮೌಲ್ಯದ 13,800 ಲೀಟರ್ ಬಿಯರ್, ಕಾಡುಗೊಂಡನಯಹಳ್ಳಿಯಲ್ಲಿ 89.25 ಲಕ್ಷ ರೂ.ಮೌಲ್ಯದ 1186.200 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ದೊಡ್ಡಕಮ್ಮನಹಳ್ಳಿಯಲ್ಲಿ 55.62 ಲಕ್ಷ ರೂ.ಮೌಲ್ಯದ 7386.120 ಲೀಟರ್ ಮದ್ಯ, ಕೋಲಾರ ಟೌನ್‍ನಲ್ಲಿ 76.86 ಲಕ್ಷ ರೂ.ಮೌಲ್ಯದ 4811.400 ಲೀಟರ್ ಮದ್ಯ, ಬಾಗಲಕೋಟೆಯಲ್ಲಿ 59 ಲಕ್ಷ ರೂ.ಮೌಲ್ಯದ 14688 ಲೀಟರ್ ಮದ್ಯ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕೂಡ್ಲುಗೇಟ್ ಬಳಿ 34.02 ಲಕ್ಷ ರೂ.ಮೌಲ್ಯದ 9108 ಲೀಟರ್ ಬಿಯರ್ ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವೈಟ್‍ಫೀಲ್ಡ್ ಕಂಟೈನರ್ ಕಾರ್ಪೋರೇಷನ್ ಆಫ್ ವೇರ್‍ಹೌಸ್ ಬಳಿ 49.88 ಲಕ್ಷ ರೂ.ಮೌಲ್ಯದ 9108 ಲೀಟರ್ ಬಿಯರ್, ಮತ್ತೊಂದೆಡೆ 27.43 ಲಕ್ಷ ರೂ.ಮೌಲ್ಯದ 8970 ಲೀಟರ್ ಬಿಯರ್, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮಾದನಾಯಕನಹಳ್ಳಿ, ದಾಸನಪುರ ಗ್ರಾಮದಲ್ಲಿ 46.14 ಲಕ್ಷ ರೂ.ಮೌಲ್ಯದ 13800 ಲೀಟರ್ ಬಿಯರ್ ಅನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಹೆಬ್ಬಾಳ ಬಳಿ 27.43 ಲಕ್ಷ ರೂ.ಮೌಲ್ಯದ 8970 ಲೀಟರ್ ಬಿಯರ್, ಕ್ಷಿಪ್ರ ಪಡೆಯವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಜಯನಗರ ಬಳಿ 1.34 ಕೋಟಿ ರೂ.ನಗದು, ಬೇಗೂರು ಪೊಲೀಸ್ ಠಾಣೆ ತಂಡದವರು 10 ಲಕ್ಷ ರೂ.ಮೌಲ್ಯದ 5.557 ಕೆಜಿ ಗಾಂಜಾ, ಕೋಲಾರದ ಸಿಇಎನ್ ಪೊಲೀಸ್ ತಂಡದವರು 10 ಲಕ್ಷ ರೂ.ಮೌಲ್ಯದ 10.140 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಕೋಲಾರ ಲೋಕಸಭಾ ಕ್ಷೇತ್ರದ ಕೆಜಿಎಫ್‍ನ ರಾಬರ್ಟ್‍ಸನ್‍ಪೇಟೆಯಲ್ಲಿ ಕ್ಷಿಪ್ರ ಪಡೆಯವರು 20 ಲಕ್ಷ ರೂ.ನಗದು, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ನಿಪ್ಪಾಣಿಯ ಕೋಗನಹಳ್ಳಿ ಚೆಕ್‍ಪೋಸ್ಟ್ ಬಳಿ ಸ್ಥಿರ ಕಣ್ಗಾವಲು ತಂಡದವರು 12.49 ಲಕ್ಷ ರೂ.ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.

ಕ್ಷಿಪ್ರಪಡೆಗಳು, ಸ್ಥಿರ ಕಣ್ಗಾವಲು ತಂಡಗಳು ಮತ್ತು ಪೊಲೀಸ್ ಅಧಿಕಾರಿಗಳು ನಗದು, ಮದ್ಯ, ಡ್ರಗ್ಸ್, ಬೆಲೆಬಾಳುವ ಲೋಹ ಮತ್ತು ಉಚಿತ ಉಡುಗೊರೆ ವಶಪಡಿಸಿಕೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ 1,707 ಎಫ್‍ಐಆರ್ ಗಳನ್ನು ದಾಖಲಿಸಿದ್ದಾರೆ.

ಅಬಕಾರಿ ಇಲಾಖೆಯು ಘೋರ ಅಪರಾಧ ಅಡಿಯಲ್ಲಿ 2,200 ಪ್ರಕರಣಗಳನ್ನು ದಾಖಲಿಸಿದೆ. ಪರವಾನಗಿ ಉಲ್ಲಂಘನೆ ಅಡಿಯಲ್ಲಿ 2,828 ಪ್ರಕರಣ ದಾಖಲಿಸಿದೆ. ಎನ್‍ಡಿಪಿಎಸ್ ಅಡಿಯಲ್ಲಿ 125 ಪ್ರಕರಣಗಳನ್ನು ಮತ್ತು ಕರ್ನಾಟಕ ಅಬಕಾರಿ ಕಾಯ್ದೆ ಅಡಿ 15,013 ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು 1,349 ವಿವಿಧ ರೀತಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮನೆಯಿಂದ ಮತ ಚಲಾಯಿಸಿದ 16,654 ಮತದಾರರು

ಮನೆಯಿಂದ ಮತದಾನ ಮಾಡಲು ಅರ್ಜಿ ಸಲ್ಲಿಸಿದ್ದ 48,609 ಮತದಾರರ ಪೈಕಿ 85 ವರ್ಷಕ್ಕಿಂತ ಮೇಲ್ಪಟ್ಟ 12,515 ಹಾಗೂ ಶೇ.40ಕ್ಕಿಂತ ಹೆಚ್ಚಿನ ದಿವ್ಯಾಂಗರಾಗಿರುವ 4,139 ಮತದಾರರು ಎ.13ರವರೆಗೆ ಮತದಾನ ಮಾಡಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News