ರಾಜ್ಯದಾದ್ಯಂತ 60 ಕಡೆಗಳಲ್ಲಿ ಲೋಕಾಯುಕ್ತ ಶೋಧ

Update: 2024-03-27 16:28 GMT

ಬೆಂಗಳೂರು : ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಆರೋಪ ಕೇಳಿ ಬಂದಿರುವ ಹಿನ್ನೆಲೆ ಅಬಕಾರಿ ಇಲಾಖೆ ಉಡುಪಿ ಉಪ ಆಯುಕ್ತೆ ರೂಪಾ, ಸೋಮವಾರಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಜಯಣ್ಣ ಬಿ.ವಿ. ಸೇರಿದಂತೆ 13 ಸರಕಾರಿ ಅಧಿಕಾರಿಗಳ ನಿವಾಸ ಸೇರಿದಂತೆ ಒಟ್ಟು 60 ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಶೋಧ ಕಾರ್ಯ ಕೈಗೊಂಡರು.

ಬುಧವಾರ ಬೆಳಗ್ಗೆ ಏಕಕಾಲಕ್ಕೆ ಲೋಕಾಯುಕ್ತ ಪೊಲೀಸರು ರಾಜ್ಯದಾದ್ಯಂತ 60 ಸ್ಥಳಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದರು. ಈ ವೇಳೆ ದಾಖಲೆ ಇಲ್ಲದ ನಗದು, ವಸ್ತುಗಳನ್ನು ಪತ್ತೆಯಾಗಿದ್ದು, ಜಪ್ತಿ ಮಾಡಲಾಗಿದೆ.

13 ಎಸ್ಪಿಗಳು, 12 ಡಿವೈಎಸ್ಪಿಗಳು, 25 ಪೊಲೀಸ್ ಇನ್‍ಸ್ಪೆಕ್ಟರ್ ಗಳು ಸೇರಿದಂತೆ 130 ಅಧಿಕಾರಿಗಳು, ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಜತೆಗೆ, ಆಸ್ತಿಯ ದಾಖಲೆ ಪತ್ರ ಮತ್ತು ಮೌಲ್ಯವನ್ನು ಪರಿಶೀಲಿಸಿ ತನಿಖೆ ಮುಂದುವರೆಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.

ಬಿಬಿಎಂಪಿ ಯಲಹಂಕ ವಲಯದ ಮುಖ್ಯ ಇಂಜಿನಿಯರ್ ರಂಗನಾಥ್, ಉತ್ತರ ಕನ್ನಡದ ಕಿರಿಯ ಇಂಜಿನಿಯರ್ ಪ್ರಕಾಶ್ ರೇವಣಕರ, ಮೈಸೂರಿನ ಸಹಾಯಕ ಇಂಜಿನಿಯರ್ ಫಯಾಝ್ ಅಹ್ಮದ್, ಬಿಡದಿ ತಾಲೂಕಿನ ಮಂಚನಾಯಕನಹಳ್ಳಿ ಗ್ರಾ.ಪಂ.ಯ ಪಿಡಿಒ ಯತೀಶ್ ಹಾಗೂ ಮತ್ತೋರ್ವ ಪಿಡಿಒ ಶಿಬಾ ನಿಖಾತ್ ಧಾರವಾಡದ ವಲಯ ಅರಣ್ಯ ಅಧಿಕಾರಿ ಮಹೇಶ್ ಚಂದ್ರಯ್ಯ ಹಿರೇಮಠ.

ಬೀದರ್ ನ ಕಾರ್ಯನಿರ್ವಾಹಕ ಇಂಜಿನಿಯರ್ ಶಿವಕುಮಾರ ಸ್ವಾಮಿ, ಕೋಲಾರದ ಸಹಾಯಕ ನಿರ್ದೇಶಕ ನಾಗರಾಜಪ್ಪ, ವಿಜಯಪುರದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಷಣ್ಮುಖಪ್ಪ, ಚಿಕ್ಕಬಳ್ಳಾಪುರದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸದಾಶಿವಯ್ಯ, ಮಳವಳ್ಳಿ ತಾಲೂಕಿನ ಅಗಸನಪುರ ಗ್ರಾಮ ಪಂಚಾಯಿತಿಯ ದ್ವಿತೀಯ ದರ್ಜೆ ಸಹಾಯಕ ಕೃ‌ಷ್ಣೆ ಗೌಡ, ಬೆಳಗಾವಿ ಜಿಲ್ಲೆಯ ನಿಡಗುಂದಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸದಾಶಿವ ಜಯಪ್ಪ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ.

ಅದರಲ್ಲೂ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್ ಐಡಿಎಲ್) ಇಂಜಿನಿಯರ್ ಸದಾಶಿವಯ್ಯ ಅವರ ಕಚೇರಿ, ಯಲಹಂಕ ಬಾಡಿಗೆ ಮನೆ, ಮೈಸೂರಿನ ರಾಮಕೃಷ್ಣ ನಗರದ ಮನೆ, ಬಗಾದಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಮನೆ, ಟಿ.ನರಸೀಪುರದ ಒಕ್ಕಲಿಗೆರೆಯಲ್ಲಿರುವ ಮನೆಯ ಮೇಲೆ ದಾಳಿ ನಡೆದಿದೆ.

ಅದೇ ರೀತಿ, ಸೋಮವಾರಪೇಟೆ ತಾಲೂಕು ಪಂಚಾಯಿತಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಜಯಣ್ಣ ಈಗಷ್ಟೇ ಕಡಬ ತಾಲೂಕಿಗೆ ವರ್ಗಾವಣೆಯಾಗಿದ್ದರು. ಕಡಬದಲ್ಲಿನ ಅವರ ಕಚೇರಿ, ಕುಶಾಲನಗರದಲ್ಲಿನ ಮನೆ ಮೇಲೆ ದಾಳಿ ನಡೆಸಲಾಗಿದೆ.

ಸಹಾಯಕ ಇಂಜಿನಿಯರ್ ಫಯಾಜ್ ಅಹ್ಮದ್ ಅವರ ಕುಶಾಲನಗರದಲ್ಲಿನ ಮನೆ, ಪಿರಿಯಾಪಟ್ಟಣದ ತೋಟದ ಮನೆ ಹಾಗೂ ಮಡಿಕೇರಿಯಲ್ಲಿನ ಅವರ ಸಂಬಂಧಿಕರ ಮನೆ ದಾಳಿ ನಡೆಸಲಾಗಿದೆ. ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರದ (ಕೆಡಿಎ) ಜ್ಯೂನಿಯರ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಪ್ರಕಾಶ ರೇವಣಕರ ಅವರ ಕಚೇರಿ, ಲಿಂಗನಾಯ್ಕವಾಡಾದಲ್ಲಿರುವ ಮನೆ, ಹಬ್ಬುವಾಡಾದಲ್ಲಿರುವ ಫ್ಲ್ಯಾಟ್, ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದಲ್ಲಿರುವ ಮೂಲಮನೆ ಮೇಲೆ ಪ್ರತ್ಯೇಕ ತಂಡಗಳು ದಾಳಿ ನಡೆಸಿ, ದಾಖಲೆ ಪರಿಶೀಲನೆಯಲ್ಲಿ ತೊಡಗಿವೆ.

ಚನ್ನಪಟ್ಟಣ ಮೈಲನಾಯಕನಹಳ್ಳಿ ಪಿಡಿಒ ಶಿಬಾ ನಿಖಾತ್ ಹಾಗೂ ಪಿಡಿಒ ಯತೀಶ್ ಅವರ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಯತೀಶ್ 20 ಕೋಟಿಗೂ ಅಧಿಕ ಆಸ್ತಿ ಹೊಂದಿದ್ದಾರೆ. ಸದ್ಯ ಪತ್ನಿ ಹೆಸರಿನಲ್ಲಿ ಮೈಸೂರಿನಲ್ಲಿ ಮನೆ ನಿರ್ಮಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈಗಲ್ಟನ್ ರೆಸಾರ್ಟ್‍ನಲ್ಲಿ ಬಾಡಿಗೆ ಮನೆಯಲ್ಲಿದ್ದ ಯತೀಶ್ ಅವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ದಾಳಿಗೊಳಗಾಗಿರುವ ಯತೀಶ್ ಮತ್ತು ಶಿಬಾ ಇಬ್ಬರೂ ಒಂದೇ ಬ್ಯಾಚ್‍ನ ಪಿಡಿಒಗಳಾಗಿದ್ದಾರೆ. ಶಿಬಾ ಅವರೂ ಅಕ್ರಮವಾಗಿ ಆಸ್ತಿ ಸಂಪಾದಿಸಿರುವ ಆರೋಪವಿದ್ದು, ಒಂದು ತಿಂಗಳಿಂದ ಕರ್ತವ್ಯಕ್ಕೆ ಗೈರಾಗಿದ್ದರು ಎಂದು ಹೇಳಲಾಗುತ್ತಿದೆ.

ಮಂಚನಾಯಕನಹಳ್ಳಿ ರಾಜ್ಯದಲ್ಲೇ ಅತಿ ಹೆಚ್ಚು ತೆರಿಗೆ ವಸೂಲಿಯಾಗುವ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎರಡು ವರ್ಷದಿಂದ ಇಲ್ಲಿ ಭಾರೀ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದೆ. ಹಾಗಾಗಿ, ಅಲ್ಲಿ ಪಿಡಿಒ ಆಗಿರುವ ಯತೀಶ್ ಅವರ ಮನೆ ಹಾಗೂ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News