ಮಡಿಕೇರಿ: ಶೀಘ್ರದಲ್ಲೇ 150 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಸಾರ್ವಜನಿಕ ಸೇವೆಗೆ

Update: 2023-11-26 08:19 GMT

ಮಡಿಕೇರಿ: ಕೊಡಗು ಜಿಲ್ಲೆಗೆ ಅತ್ಯಗತ್ಯವಾಗಿರುವ ಹೆಚ್ಚುವರಿ 150 ಹಾಸಿಗೆಗಳ ಸಾಮರ್ಥ್ಯ ಹೊಂದಿರುವ ಸುಸಜ್ಜಿತ ಆಸ್ಪತ್ರೆ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿಯೇ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ.

ರಾಜ್ಯ ಸರಕಾರದ ಆಯವ್ಯಯದಲ್ಲಿ ಘೋಷಣೆ ಮಾಡಿದಂತೆ 100 ಕೋಟಿ ರೂ. ವೆಚ್ಚದಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಹಸಿರು ನಿಶಾನೆ ದೊರಕಿತ್ತು. 2020 ಜ.28ರಂದು ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. 150 ಹಾಸಿಗೆ ಸಾಮರ್ಥ್ಯದ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಹಸ್ತಾಂತರ ಪ್ರಕ್ರಿಯೆ ಸಿದ್ಧತೆ ನಡೆಯುತ್ತಿದೆ. 300 ಹಾಸಿಗೆ ಸಾಮರ್ಥ್ಯದ ಕಟ್ಟಡ ಕಾಮಗಾರಿಯು ಡಿಸೆಂಬರ್ ಅಂತ್ಯದಲ್ಲಿ ಪೂರ್ಣಗೊಳ್ಳಲಿದೆ. ಸಂಪೂರ್ಣ ಸೇವೆ ನೀಡಲು ಎರಡನೇ ಹಂತದಲ್ಲಿ ಸರಕಾರದಿಂದ ಅನುದಾನ ಮಂಜೂರು ಆಗಬೇಕಾಗಿದೆ. 2023-24ನೇ ಆಯವ್ಯಯದಲ್ಲಿ ಕಾಮಗಾರಿ ಪೂರ್ಣ ಗೊಳಿಸಲು ಅಗತ್ಯ ಅನುದಾನ ಪ್ರಸ್ತಾವ ಸರಕಾರದ ಮಟ್ಟದಲ್ಲಿದೆ.

ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯ ಎ.ಬ್ಲಾಕ್ ಆವರಣದಲ್ಲಿ 300 ಹಾಸಿಗೆಗಳು ಸೇರಿದಂತೆ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ (ಬಿ-ಬ್ಲಾಕ್) 150 ಹಾಸಿಗೆಗಳ ಸಾಮರ್ಥ್ಯದ ಒಟ್ಟು 2 ಕಟ್ಟಡಗಳ ನಿರ್ಮಾಣ ಕಾಮಗಾರಿ ಸದ್ಯದಲ್ಲಿಯೇ ಪೂರ್ಣಗೊಳ್ಳಲಿದೆ. ಕಾಮಗಾರಿಯನ್ನು ಮೆ.ರಾಮ್ ಕೃಷಿ, ಇನ್ಫ್ರಾಸ್ಟ್ರೆಕ್ ಪ್ರೈವೆಟ್ ಲಿಮಿಟೆಡ್, ಬೆಂಗಳೂರು ಕಂಪೆನಿ ನಿರ್ಮಿಸುತ್ತಿದ್ದು, ಟೆಂಡರ್ ಮೌಲ್ಯ 135 ಕೋಟಿ ರೂ.ಗಳಾಗಿವೆ.

ಏನೇನಿರಲಿವೆ..?

ನೂತನ ಕಟ್ಟಡದಲ್ಲಿ ಅತ್ಯಾಧುನಿಕ ಶಸ್ತ್ರ ಚಿಕಿತ್ಸೆ ಕೊಠಡಿಗಳು, ತೀವ್ರ ನಿಗಾ ಘಟಕ, ವಿವಿಧ ವಿಭಾಗಗಳ ಐಸಿಯು ವಾರ್ಡ್ಗಳು, ಸುಸಜ್ಜಿತ ವಾರ್ಡ್ಗಳು, ಸಿಎಸ್ಎಸ್ಡಿ ಘಟಕ, ಮರಣೋತ್ತರ ಪರೀಕ್ಷೆ ಘಟಕ, ಕೇಂದ್ರ ಉಗ್ರಾಣ, ಔಷಧಿ ಘಟಕ, ಅತ್ಯಾಧುನಿಕ ಪ್ರಯೋಗಾಲಯಗಳು, ಜಿರಿಯಾಟ್ರಿಕ್ಸ್ ವಾರ್ಡ್, ಸ್ತ್ರೀ ಮತ್ತು ಪ್ರಸೂತಿ ರೋಗ ವಿಭಾಗ, ಮಕ್ಕಳ ವಿಭಾಗ, ವೈದ್ಯಕೀಯ ವಿಭಾಗ, ಶಸ್ತ್ರ ಚಿಕಿತ್ಸಾ ವಿಭಾಗ, ಕೀಲು ಮತ್ತೂ ಮೂಳೆ ವಿಭಾಗ, ಕೀಲು ಮತ್ತು ಮೂಳೆ ವಿಭಾಗ, ನ್ಯಾಯ ವೈದ್ಯ ಶಾಸ್ತ್ರ ವಿಭಾಗ, ಅರವಳಿಕೆ ವಿಭಾಗ, ಮನೋಶಾಸ್ತ್ರ ವಿಭಾಗ, ಇಎನ್ಟಿ, ನೇತ್ರಾ ಚಿಕಿತ್ಸಾ ವಿಭಾಗಗಳ ಉನ್ನತೀಕರಿಸಿದ ವಿಭಾಗಗಳು ಬರಲಿದೆ. ದೊಡ್ಡದಾದ ಬೋಧನೆ ಕೊಠಡಿ, ಲಿಫ್ಟ್, ವೈದ್ಯರ ಕೊಠಡಿ, ಲಾಂಡ್ರಿ, ಪಾರ್ಕಿಂಗ್ ಜಾಗ ಸೇರಿದಂತೆ ಅತ್ಯಾಧುನಿಕ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ ಎಂದು ಕಾರ್ಯಪ್ಪ ತಿಳಿಸಿದರು.

ಹುದ್ದೆಗಳ ಭರ್ತಿಗೆ ಕ್ರಮ

ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಪ್ರಾಧ್ಯಾಪಕರ ಹುದ್ದೆ 5, ಸಹ ಪ್ರಾಧ್ಯಾಪಕರ ಹುದ್ದೆ 6, ಸಹಾಯಕ ಪ್ರಾಧ್ಯಾಪಕರ ಹುದ್ದೆ 16, ಸೀನಿಯರ್ ರೆಸಿಡೆಂಟ್ ಹುದ್ದೆ 6, ಜೂನಿಯರ್ ರೆಸಿಡೆಂಟ್ ಹುದ್ದೆ 38, ಟ್ಯೂಟರ್ ಹುದ್ದೆ 10 ಖಾಲಿ ಇದ್ದು, ಇವುಗಳನ್ನು ಭರ್ತಿ ಮಾಡುವ ಸಲುವಾಗಿ ಈಗಾಗಲೇ ನೇರ ಸಂದರ್ಶನ ನಡೆಸಲಾಗಿದೆ. ಸೀನಿಯರ್ ಹಾಗೂ ಜೂನಿಯರ್ ರೆಸಿಡೆಂಟ್ ಮತ್ತು ಟ್ಯೂಟರ್ ಹುದ್ದೆಗಳನ್ನು ಕಡ್ಡಾಯ ಗ್ರಾಮೀಣ ಸೇವೆ ಮುಖಾಂತರ ಸರಕಾರದಿಂದ ಕೌನ್ಸೆಲಿಂಗ್ ಮುಖಾಂತರ ಭರ್ತಿಮಾಡಲಾಗುವುದು ಎಂದು ಕೊಡಗು ವೈದ್ಯಕೀಯ ಕಾಲೇಜಿನ ಡೀನ್ ಡಾ.ಕಾರ್ಯಪ್ಪತಿಳಿಸಿದ್ದಾರೆ.

ಹುದ್ದೆ ಭರ್ತಿಗೆ ಸರಕಾರಕ್ಕೆ ಪ್ರಸ್ತಾವ

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಾಲೇಜಿನಲ್ಲಿ 750 ಎಂಬಿಬಿಎಸ್ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಬೋಧಕ ಹಾಗೂ ಬೋಧಕೇತರ ಹುದ್ದೆಗಳ ಭರ್ತಿಗೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. 2016-17ನೇ ಸಾಲಿನಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಾಲೇಜು ಪ್ರಾರಂಭಗೊಂಡಿದ್ದು, ಎಂ.ಸಿ.ಐ. ನಿಯಮದ ಪ್ರಕಾರ ಕಾರ್ಯನಿರ್ವಹಿಸುತ್ತಿದೆ. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿಯಲ್ಲಿ 2016ರಿಂದ 150 ಎಂಬಿಬಿಎಸ್ ಸೀಟುಗಳಿಗೆ ಭಾರತೀಯ ವೈದ್ಯಕೀಯ ಮಂಡಳಿಯ ಅನುಮತಿ ಪಡೆದು ಕಾರ್ಯಾರಂಭ ಮಾಡಲಾಗಿದೆ. ಹಾಲಿ ಸಂಸ್ಥೆಯಲ್ಲಿ 750 ಎಂಬಿಬಿಎಸ್ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಎಂಬಿಬಿಎಸ್ ಕೋರ್ಸ್ 150 ಸೀಟು, ವೈದ್ಯಕೀಯ ಸ್ನಾತಕೋತ್ತರ ಸೀಟು 33, ಅರೆ ವೈದ್ಯಕೀಯ ಕೋರ್ಸ್ 120 ಸೀಟು, ಬಿಎಸ್ಸಿ ನರ್ಸಿಂಗ್ ಕೋರ್ಸ್ 100 ಸೀಟು, ಅಲೈಡ್ ಸೈನ್ಸಸ್ ಕೋರ್ಸ್ 110 ಸೀಟುಗಳಲ್ಲಿ ತರಬೇತಿ ನೀಡಲಾಗುತ್ತಿದೆ.

150 ಹಾಸಿಗೆ ಸಾಮರ್ಥ್ಯದ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರದಲ್ಲಿಯೇ ಸಾರ್ವಜನಿಕ ಸೇವೆಗೆ ದೊರೆಯಲಿದೆ. 300 ಹಾಸಿಗೆ ಸಾಮರ್ಥ್ಯದ ಕಟ್ಟಡ ಕಾಮಗಾರಿಯನ್ನು ಡಿಸೆಂಬರ್ ಅಂತ್ಯದಲ್ಲಿ ಪೂರ್ಣಗೊಳಿಸಲಾಗುವುದು. ಜಿಲ್ಲಾಸ್ಪತ್ರೆಯಲ್ಲಿ ಸದ್ಯ 300 ಹಾಸಿಗೆಯ ಸಾಮರ್ಥ್ಯವಿದ್ದು, ಈಗಾಗಲೇ ಸಿಬ್ಬಂದಿ ಕೊರತೆ ಕಾಡುತ್ತಿದೆ. ಇದೀಗ ಆಸ್ಪತ್ರೆಯನ್ನು 750 ಬೆಡ್ಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವುದರಿಂದ ಒಟ್ಟು 1646 ಬೋಧಕ, ಬೋಧಕೇತರ ಸಿಬ್ಬಂದಿ ಬೇಕಾಗುತ್ತದೆ. ಸದ್ಯ 479 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚುವರಿಯಾಗಿ 1167 ಹುದ್ದೆಗಳಿಗೆ ಮಂಜೂರಾತಿ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ.

- ಡಾ.ಕಾರ್ಯಪ್ಪ, ಡೀನ್, ಕೊಡಗು ವೈದ್ಯಕೀಯ ಕಾಲೇಜು

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಕೆ.ಎಂ. ಇಸ್ಮಾಯಿಲ್ ಕಂಡಕರೆ

contributor

Similar News