ಮಹಾತ್ಮ ಗಾಂಧಿ ಅಹಿಂಸೆ ಮೂಲಕವೇ ವಿಶ್ವವನ್ನು ತಲುಪಿದರು: ಸಿಎಂ ಸಿದ್ದರಾಮಯ್ಯ

Update: 2023-10-02 14:06 GMT

ಬೆಂಗಳೂರು ಅ.2: ದೇಶಕ್ಕೆ ಗಾಂಧಿ ಒಬ್ಬರೇ ಮಹಾತ್ಮ ಮತ್ತು ಪಿತಾಮಹ. ಯಾವುದೇ ಪ್ರಚಾರದ ಸಾಮಾಗ್ರಿ ಮತ್ತು ತಂತ್ರಜ್ಞಾನ ಇಲ್ಲದೆ ಕೇವಲ ಅಹಿಂಸೆ ಮತ್ತು ತಮ್ಮ ಬದುಕಿನ ಸರಳತೆಯಿಂದಲೇ ಮಹಾತ್ಮಗಾಂಧಿ ವಿಶ್ವದ ಮೂಲೆ ಮೂಲೆಗೆ ತಲುಪಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದಿದ್ದಾರೆ.

ಸೋಮವಾರ ನಗರದ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಮತ್ತು ಹಲವು ಇಲಾಖೆಗಳ ಸಹಯೋಗದಲ್ಲಿ ಗಾಂಧಿ ಭವನದಲ್ಲಿ ನಡೆದ ಮಹಾತ್ಮ ಗಾಂಧಿ ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗಾಂಧೀಜಿ ಅವರು ಒಮ್ಮೆ ರೈಲಿನಲ್ಲಿ ಮೂರನೇ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದರು. ಸಹ ಪ್ರಯಾಣಿಕರು, ‘ಏಕೆ ಮೂರನೇ ದರ್ಜೆ ಸೀಟಿನಲ್ಲಿ ಪ್ರಯಾಣಿಸುತ್ತಿದ್ದೀರಿ’ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಗಾಂಧಿ ಅವರು, ‘ನಾಲ್ಕನೇ ದರ್ಜೆ ರೈಲಿನಲ್ಲಿ ಇಲ್ಲ. ಇದ್ದಿದ್ದರೆ ಅಲ್ಲೇ ಪ್ರಯಾಣಿಸುತ್ತಿದ್ದೆ. ಅದು ಇಲ್ಲದ್ದರಿಂದ ಮೂರನೇ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದೇನೆ’ ಎಂದರು. ಇಷ್ಟು ಸರಳವಾದ ವ್ಯಕ್ತಿತ್ವ ಗಾಂಧಿಯವರದ್ದಾಗಿತ್ತು ಎಂದು ಸಿದ್ದರಾಮಯ್ಯ ಉದಾಹರಿಸಿದರು.

ನಮ್ಮ ಸರಕಾರ ರೂಪಿಸುತ್ತಿರುವ ಕಾರ್ಯಕ್ರಮಗಳಲ್ಲಿ ಮಹಾತ್ಮಗಾಂಧಿ ಅವರ ಆಶಯಗಳು ಸೇರಿವೆ. ಗಾಂಧಿ ಅವರ ಆಶಯದಂತೆ ಕಟ್ಟ ಕಡೆಯ ವ್ಯಕ್ತಿಗೂ ಬದುಕುವ ಅವಕಾಶಗಳನ್ನು ಸೃಷ್ಟಿಸುವುದು ನಮ್ಮ ಸರಕಾರದ ಗುರಿ ಎಂದರು. ಕಾನೂನು ಸಚಿವ ಎಚ್.ಕೆ.ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News