ಉದ್ಯೋಗವಿಲ್ಲ ಎಂಬ ಕಾರಣದಿಂದ ಪತ್ನಿಗೆ ಜೀವನಾಂಶ ನಿರಾಕರಿಸಲಾಗದು: ಹೈಕೋರ್ಟ್

Update: 2023-11-13 14:14 GMT

ಬೆಂಗಳೂರು, ನ.13: ಪತಿ ಉದ್ಯೋಗ ಕಳೆದುಕೊಂಡಿದ್ದಾನೆ ಎಂಬ ಕಾರಣದಿಂದ ಪತ್ನಿಗೆ ಜೀವನಾಂಶ ನಿರಾಕರಿಸುವಂತಿಲ್ಲ ಎಂದು ತಿಳಿಸಿರುವ ಹೈಕೋರ್ಟ್, ದುಡಿಯಲು ಶಕ್ತಿ ಇರುವ ಪತಿ ಜೀವನಾಂಶವನ್ನು ನೀಡಲೇಬೇಕಾಗುತ್ತದೆ ಎಂದು ಆದೇಶಿಸಿದೆ.

ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿ ಈ ಆದೇಶ ನೀಡಿದೆ.

ಅಲ್ಲದೇ, ಪತಿ ಉದ್ಯೋಗ ಕಳೆದುಕೊಂಡಿದ್ದಾರೆ. ಹೀಗಾಗಿ, ಅವರಿಗೆ ಜೀವನಾಂಶ ನೀಡುವಂತೆ ಹೊರಡಿಸಿರುವ ಆದೇಶ ರದ್ದುಗೊಳಿಸಬೇಕೆಂದು ಕೋರಿದ್ದಾರೆ. ಆದರೆ ಪತಿಗೆ ದುಡಿಯುವ ಶಕ್ತಿ ಇದೆ. ಆತ ಕೆಲಸ ಮಾಡಿ ತನ್ನ ಪತ್ನಿಯನ್ನು ನೋಡಿಕೊಳ್ಳಬೇಕಾಗುತ್ತದೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಅಂಜು ಗಾರ್ಗ್ ವರ್ಸಸ್ ದೀಪಕ್ ಕುಮಾರ್ ಗಾರ್ಗ್ ಪ್ರಕರಣದಲ್ಲಿ ಸ್ಪಷ್ಟ ಆದೇಶ ನೀಡಿದೆ.

ಅದರಂತೆ ಉದ್ಯೋಗವಿಲ್ಲದಿರುವುದು ಜೀವನಾಂಶ ಪಾವತಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಆದೇಶಿಸಿದೆ. ಜೊತೆಗೆ ಪತ್ನಿಗೆ ಜೀವನಾಂಶ ನೀಡಬೇಕೆಂಬ ಕೌಟುಂಬಿಕ ನ್ಯಾಯಾಲಯದ ಆದೇಶ ಸರಿಯಾಗಿಯೇ ಇದೆ. ಅದರಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿದೆ.

ಅರ್ಜಿದಾರರ ಪರ ವಕೀಲರು, ಪತಿ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಸದ್ಯ ಜೀವನಾಂಶ ಪಾವತಿಸುವ ಸ್ಥಿತಿಯಲ್ಲಿ ಇಲ್ಲ. ಜತೆಗೆ ಕೌಟುಂಬಿಕ ನ್ಯಾಯಾಲಯ ಪತಿ ತಿಂಗಳಿಗೆ 50 ಸಾವಿರ ಗಳಿಸುತ್ತಿದ್ದಾರೆಂಬ ತೀರ್ಮಾನಕ್ಕೆ ಬಂದಿದೆ. ಆದರೆ ವಾಸ್ತವದಲ್ಲಿ ಅವರಿಗೆ ಅಷ್ಟು ಆದಾಯವಿಲ್ಲ. ಹೀಗಾಗಿ, ಈ ಅಂಶಗಳನ್ನು ಪರಿಗಣಿಸಿ ಜೀವನಾಂಶ ಪಾವತಿಸುವಂತೆ ಕೌಟುಂಬಿಕ ನ್ಯಾಯಾಲಯ ನೀಡಿರುವ ಆದೇಶ ರದ್ದುಗೊಳಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಈ ಮನವಿಯನ್ನು ನ್ಯಾಯಪೀಠ ತಿರಸ್ಕರಿಸಿದೆ.

ಪ್ರಕರಣವೇನು?: ಪತಿ ಮತ್ತು ಪತ್ನಿ 2020ರಲ್ಲಿ ಮದುವೆಯಾಗಿದ್ದರು. ಆದರೆ ಭಿನ್ನಾಭಿಪ್ರಾಯದಿದಾಗಿ ಬೇರ್ಪಟ್ಟಿದ್ದರು. ಇಬ್ಬರೂ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಹಿಂದೂ ವಿವಾಹ ಕಾಯಿದೆ ಸೆಕ್ಷನ್ 24ರ ಅನ್ವಯ ಪತ್ನಿ, ಪರಿತ್ಯಕ್ತ ಪತಿಯಿಂದ ಮಧ್ಯಂತರ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದರು.

ಅದಕ್ಕೆ ಪೂರಕವಾಗಿ ಪತಿಯ ಆಸ್ತಿಯ ವಿವರಗಳನ್ನೂ ನ್ಯಾಯಾಲಯಕ್ಕೆ ಒದಗಿಸಿದ್ದರು. ಅದನ್ನು ಆಧರಿಸಿ ನ್ಯಾಯಾಲಯ, ಆಸ್ತಿ ಮತ್ತು ಸಾಲಗಳ ವಿವರಗಳನ್ನು ಪರಿಗಣಿಸಿ ಪತಿ ಪತ್ನಿಗೆ ಪ್ರತಿ ತಿಂಗಳ 10 ಸಾವಿರ ರೂ. ಮಧ್ಯಂತರ ಜೀವನಾಂಶ ನೀಡುವಂತೆ ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News