ತಜ್ಞರ ವರದಿಯ ಆಧಾರದ ಮೇಲೆ ತುಂಗಭದ್ರ ಜಲಾಶಯದ ಗೇಟ್‍ಗಳ ನಿರ್ವಹಣೆ: ಸಿಎಂ ಸಿದ್ದರಾಮಯ್ಯ

Update: 2024-09-22 13:34 GMT

ಕೊಪ್ಪಳ: ತುಂಗಭದ್ರ ಜಲಾಶಯಕ್ಕೆ ತಜ್ಞರ ವರದಿಯ ಆಧಾರದ ಮೇಲೆ ಗೇಟ್‍ಗಳ ನಿರ್ವಹಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ರವಿವಾರ ಜಿಲ್ಲೆಯ ಗಿಣಿಗೇರಾ ಹೆಲಿಪ್ಯಾಡ್‍ನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕ್ರಸ್ಟ್ ಗೇಟ್‍ಗಳನ್ನು 50 ವರ್ಷಕ್ಕೆ ಬದಲಿಸಬೇಕು. 70 ವರ್ಷಗಳಿಂದ ಗೇಟ್‍ಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿದೆ. ಉತ್ತಮ ನಿರ್ವಹಣೆ ಮಾಡಿರುವುದರಿಂದ 70 ವರ್ಷ ಕೆಲಸ ಮಾಡಿದೆ. ಪ್ರಸ್ತುತ ತಜ್ಞರ ಸಮಿತಿ ರಚನೆಯಾಗಿದ್ದು ವರದಿ ನೀಡಬೇಕಿದೆ ಎಂದರು.

ಎರಡನೇ ಬೆಳೆಗೆ ನೀರು ಲಭ್ಯ: ತುಂಗಭದ್ರ ಜಲಾಶಯ ಮತ್ತೆ ತುಂಬಿದೆ. 101.77 ಟಿಎಂಸಿ ನೀರು ಲಭ್ಯವಿದೆ. ಮುಂಗಾರು ಮತ್ತು ಹಿಂಗಾರು ಬಿತ್ತನೆಗೆ ನೀರು ಸಿಗಲಿದೆ. ಕೊಚ್ಚಿಹೋಗಿದ್ದ 19ನೆ ಕ್ರಸ್ಟ್ ಗೇಟ್‍ನ್ನು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿ, ಝಮೀರ್ ಅಹಮದ್ ಖಾನ್ ಸ್ಥಳದಲ್ಲಿಯೇ ಇದ್ದು ಗೇಟ್ ದುರಸ್ತಿಗೆ ಕ್ರಮ ವಹಿಸಿದರು.

ತಜ್ಞ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ, ಜಿಂದಾಲ್, ಇಂಜಿನಿಯರಿಂಗ್ ನಾರಾಯಣ್ ಹಾಗೂ ಇಂಜಿನಿಯರ್‍ಗಳು, ಅಧಿಕಾರಿಗಳು ಹಗಲು-ರಾತ್ರಿ ಕೆಲಸ ಮಾಡಿದ್ದರಿಂದ ಆದಷ್ಟು ತ್ವರಿತವಾಗಿ ಗೇಟ್ ಅಳವಡಿಸಲು ಸಾಧ್ಯವಾಯಿತು. ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಯಿತು. 20ಕ್ಕೂ ಹೆಚ್ಚು ಟಿಎಂಸಿ ನೀರು ಉಳಿಯಿತು. ಬೆಳೆಗೆ ನೀರು ಸಿಗುತ್ತದೋ ಇಲ್ಲವೋ ಎಂಬ ರೈತರ ಆತಂಕ ನಿವಾರಣೆಯಾಗಿದೆ. ಹಿಂಗಾರಿನ ಬೆಳೆಗೆ ಯಾವುದೇ ತೊಂದರೆ ಇಲ್ಲ. ಎರಡನೆ ಬೆಳೆಗೆ ನೀರು ಒದಗಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ರಸ್ತೆಗಳ ದುರಸ್ತಿ: ನಮ್ಮ ಸರಕಾರವಿದ್ದಾಗ ರಸ್ತೆಗಳ ನಿರ್ಮಾಣ ಮಾಡಿದ್ದೇವೆ. ಬಿಜೆಪಿ ಸರಕಾರದ ಅವಧಿಯಲ್ಲಿ ರಸ್ತೆಗಳ ದುರಸ್ತಿ ಮಾಡಿಲ್ಲ. ಈ ವರ್ಷ ಉತ್ತಮ ಮಳೆಯಾಗಿರುವುದರಿಂದ ರಸ್ತೆಗಳು ಹಾಳಾಗಿದ್ದು, ಅವುಗಳ ದುರಸ್ತಿ ಮಾಡಲು ಕೂಡಲೇ ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದರು.

46 ವಿಷಯಗಳ ಬಗ್ಗೆ ತೀರ್ಮಾನ: ಕಲಬುರ್ಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 56 ವಿಷಯಗಳಲ್ಲಿ 46 ವಿಷಯಗಳು ಹೈದರಾಬಾದ್ ಕರ್ನಾಟಕಕ್ಕೆ ಸಂಬಂಧಿಸಿತ್ತು. ಇದರಲ್ಲಿ ಕೆಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಹಾಲಿನ ದರ ಹೆಚ್ಚು ಮಾಡಿದರೆ ಆ ಹಣ ಪೂರ್ಣ ರೈತರಿಗೆ: ಒಂದು ವೇಳೆ ಹಾಲಿನ ದರ ಹೆಚ್ಚಿಸುವ ಬಗ್ಗೆ ತೀರ್ಮಾನವಾದರೆ ಅದನ್ನು ಸಂಪೂರ್ಣವಾಗಿ ಹೈನುಗಾರಿಕೆ ಮಾಡುವ ರೈತರಿಗೆ ಕೊಡಬೇಕೆಂದು ಸೂಚನೆ ನೀಡಿದ್ದೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸುಳ್ಳು ಆರೋಪ: ಶಾಸಕ ಮುನಿರತ್ನ ವಿಚಾರದಲ್ಲಿ ನಾವು ಯಾರ ಮೇಲೂ ದ್ವೇಷದ ರಾಜಕಾರಣ ಮಾಡುವುದಿಲ್ಲ. ಅಪರಾಧ ಮಾಡಿ ಎಂದು ನಾವು ಯಾರಿಗೂ ಹೇಳಿಲ್ಲ. ಶಾಸಕರು ನನ್ನನ್ನು ಭೇಟಿ ಮಾಡಿ ಎಸ್‍ಐಟಿ ರಚಿಸಲು ಕೋರಿದರು. ಅವರ ಮೇಲೆ ಮೂರು ಪ್ರಕರಣಗಳು ದಾಖಲಾಗಿದೆ. ತಪ್ಪು ಮಾಡಿದರೆ ತಾನೇ ಎಫ್‍ಐಆರ್ ಆಗುತ್ತದೆ. ನಾವು ಯಾರಿಗೂ ಕಿರುಕುಳ ನೀಡಿ ಕೇಸು ದಾಖಲಿಸಿಲ.್ಲ ಈ ಆರೋಪ ಸುಳ್ಳು ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News