ಮಣಿಪುರ ಘಟನೆ ‘ವಿಶ್ವಗುರುವಿನ ಸ್ಥಾನದಲ್ಲಿರುವ ಪ್ರಧಾನಿ’ ತಲೆತಗ್ಗಿಸುವಂತಹ ಕೃತ್ಯ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

Update: 2023-07-21 16:42 GMT

ಬೆಂಗಳೂರು, ಜು.21: ‘ಮಣಿಪುರದಲ್ಲಿನ ಕೃತ್ಯಗಳು ಜಗತ್ತಿನೆದುರಿಗೆ ವಿಶ್ವಗುರುವಿನ ಸ್ಥಾನದಲ್ಲಿರುವಂತಹ ಪ್ರಧಾನಿ ಮೋದಿ ತಲೆತಗ್ಗಿಸುವಂತಹ ವಿಚಾರವಾಗಿದೆ’ ಎಂದು ಹಿರಿಯ ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಅತೀವ ಬೇಸರ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಗರದ ಪುರಭವನದ ಮುಂಭಾಗದಲ್ಲಿ ‘ಮಣಿಪುರದ ಸಂತ್ರಸ್ತರ ಜತೆಯಲ್ಲಿ ನಾವಿದ್ದೇವೆ’ ಎಂಬ ಶೀರ್ಷಿಕೆಯಡಿಯಲ್ಲಿ ವಿವಿಧ ಜನಪರ ಸಂಘಟನೆಗಳ ಒಕ್ಕೂಟದಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ಮಣಿಪುರದಲ್ಲಿ 57 ದಿನಗಳಿಂದ ನಡೆಯುತ್ತಿರುವ ಘಟನೆಗಳು ಹಾಗೂ ಮಹಿಳೆಯರ ಬೆತ್ತಲೆ ಮೆರವಣಿಗೆ ಇಡೀ ದೇಶವೇ ನಾಚಿಕೆಯಿಂದ ತಲೆ ತಗ್ಗಿಸುವಂತಹದ್ದಾಗಿದೆ. ಆದರೂ, ಡಬ್ಬಲ್ ಇಂಜಿನ್ ಸರಕಾರ ಮಾತ್ರ ಎಚ್ಚೆತ್ತುಕೊಂಡಿಲ್ಲ ಎಂದು ಟೀಕಿಸಿದರು.

ದೇಶದ ಪ್ರಜ್ಞಾವಂತರು ಈ ಕುರಿತು ದನಿ ಎತ್ತದಿದ್ದರೆ ಇದು ನಿಜಕ್ಕೂ ದೇಶದ್ರೋಹವಾಗುತ್ತದೆ. ಅಲ್ಲಿನ ಹೆಣ್ಣಿನ ನೋವಿಗೆ ಸ್ಪಂದಿಸಿ ನಾವೆಲ್ಲರೂ ದನಿ ಎತ್ತಿದ್ದೇವೆ. ದೇಶದಲ್ಲಿ ಪ್ರಜಾಪ್ರಭುತ್ವ ಉಳಿದು ಹೆಣ್ಣಿನ ರಕ್ಷಣೆಯಾಗಬೇಕು. ದ್ವೇಷವನ್ನು ಅಳಿಸಿ ಸೌಹಾರ್ದತೆಯನ್ನು ಉಳಿಸುವ ಕೆಲಸವಾಗಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.

ಸಾಮಾಜಿಕ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಮಾತನಾಡಿ, ಮಣಿಪುರದಲ್ಲಿ ಭೀಬತ್ಸಕವಾದ, ಯಾವುದೇ ಜನರು ಒಪ್ಪಲು ಸಾಧ್ಯವಾಗದಂತಹ ಘಟನೆಗಳು ನಡೆಯುತ್ತಿದ್ದು, ಇದರ ಸಂಪೂರ್ಣ ಜವಾಬ್ದಾರಿಯನ್ನು ದೇಶದ ಪ್ರಧಾನಿ ಹಾಗೂ ಗೃಹ ಸಚಿವರು ಹೊರಬೇಕಿದೆ. ಭೇಟಿ ಬಜಾವೋ, ಭೇಟಿ ಪಡಾವೋ ಎನ್ನುತ್ತಿದ್ದ ಪ್ರಧಾನಿಗಳ ಘೋಷಣೆ ವಿರುದ್ಧವಾಗಿ ಇಂದು ಮಹಿಳೆಯರ, ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿರುವುದು ಖಂಡನೀಯ ಎಂದರು.

ಈ ಘಟನೆ ಕುರಿತಾಗಿ ದೇಶದ ಪ್ರಧಾನಿಯವರು ಎಲ್ಲೋ ಕುಳಿತು ಕೇವಲ 30 ನಿಮಿಷ ಮಾತನಾಡಿದರೆ ಈ ಕತೆ ಮುಗಿಯುವುದಿಲ್ಲ. ಎರಡು ತಿಂಗಳಿನಿಂದ ಅಲ್ಲಿನ ಜನತೆ ಪಡುತ್ತಿರುವ ಹಿಂಸೆಯನ್ನು ಗಮನಿಸಿದ ಪ್ರಧಾನಿಯವರು ಕೇವಲ ಓಟ್‍ಬ್ಯಾಂಕ್‍ಗಾಗಿ ಈಗ ಮಾತನಾಡಿದ್ದಾರೆ. ಗಲಭೆಯನ್ನು ಕೇಂದ ಹಾಗೂ ಮಣಿಪುರದ ಸರಕಾರಗಳು ನಿಯಂತ್ರಿಸಲು ವಿಫಲವಾಗಿದ್ದು, ಇದೊಂದು ರೀತಿಯಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯಾಗಿದೆ. ಆದ್ದರಿಂದ ರಾಷ್ಟ್ರಪತಿಯವರು ಮಣಿಪುರದ ಸರಕಾರವನ್ನು ವಜಾಗೊಳಿಸಬೇಕು ಎಂದು ಅಕ್ಕೈ ಪದ್ಮಶಾಲಿ ಒತ್ತಾಯಿಸಿದರು.

ವಕೀಲ ವಿನಯ್ ಶ್ರೀನಿವಾಸ್ ಮಾತನಾಡಿ, ಮಣಿಪುರ ಮಹಿಳೆಯರ ಕೃತ್ಯ ಇಡೀ ಮನುಕುಲವೇ ತಲೆತಗ್ಗಿಸುವಂತಹದ್ದಾಗಿದೆ. ಈ ಕೃತ್ಯಗಳ ನೇರಹೊಣೆಗಾರರು ದೇಶದ ಪ್ರಧಾನಮಂತ್ರಿ, ಗೃಹ ಸಚಿವರು ಹಾಗೂ ಕೇಂದ್ರ ಸರಕಾರವಾಗಿದೆ ಎಂದರು.

ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಮಾವಳ್ಳಿ ಶಂಕರ್, ಬಿ.ಗೋಪಾಲ್, ಹೆಬ್ಬಾಳ್ ವೆಂಕಟೇಶ್, ಮಾರಪ್ಪ, ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷೆ ಕೆ.ಎಸ್.ವಿಮಲಾ, ಗೌರಮ್ಮ, ಯುವ ವಕೀಲೆ ಪೂರ್ಣ, ಮನೋರಮಾ, ಮೈತ್ರೇಯಿ ಸೇರಿ ಇತರರು ಭಾಗವಹಿಸಿದ್ದರು.

 

 

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News