ಸರ್ವಾಧಿಕಾರಿ ಕೇಂದ್ರ ಸರಕಾರದಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ಸಂಸದ ಡಿ.ಕೆ.ಸುರೇಶ್

Update: 2023-12-21 16:28 GMT

ಹೊಸದಿಲ್ಲಿ: ‘ಸರ್ವಾಧಿಕಾರಿ ಮನಸ್ಥಿತಿಯ ಕೇಂದ್ರ ಸರಕಾರವು ವಿರೋಧ ಪಕ್ಷಗಳ ಧ್ವನಿಯನ್ನು ಹತ್ತಿಕ್ಕುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ’ ಎಂದು ಸಂಸದ ಡಿ.ಕೆ.ಸುರೇಶ್ ಅವರು  ಕಿಡಿಕಾರಿದ್ದಾರೆ.

ಗುರುವಾರ ಸಂಸತ್ ಭದ್ರತಾ ಲೋಪ ವಿಚಾರವಾಗಿ ಸಂಸತ್ತಿನಲ್ಲಿ ಚರ್ಚೆಗೆ ಆಗ್ರಹಿಸಿ ಸದನದ ಬಾವಿಗೆ ಇಳಿದು ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಸುರೇಶ್ ಸೇರಿದಂತೆ ಮೂವರು ಸದಸ್ಯರನ್ನು ಅಮಾನತು ಮಾಡಲಾಯಿತು. ಈ ಸಂಬಂಧ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದ ದೇವಸ್ಥಾನದ ಒಳಗೆ ಅಕ್ರಮ ಪ್ರವೇಶದ ಮೂಲಕ ದಾಳಿ ಮಾಡಲಾಗಿದ್ದು, ಈ ಭದ್ರತಾ ವೈಫಲ್ಯ ಕುರಿತು ಪ್ರಧಾನಿ ಹಾಗೂ ಕೇಂದ್ರ ಗೃಹಸಚಿವರು ಲೋಕಸಭೆಯಲ್ಲಿ ಉತ್ತರ ನೀಡಬೇಕು ಎಂದು ನಾವು ಆಗ್ರಹಿಸಿದೆವು ಎಂದು ಹೇಳಿದರು.

ಪ್ರಜಾಪ್ರಭುತ್ವ ದೇವಾಲಯಕ್ಕೆ ರಕ್ಷಣೆ ಇಲ್ಲ. ಇನ್ನೂ ಬೇರೆಯವರಿಗೆ ರಕ್ಷಣೆ ನೀಡಲಾಗುತ್ತದೆಯೇ ಎಂದು ಧ್ವನಿ ಎತ್ತಿದ ಕಾರಣ, ಇಂದು ಮೂವರು ಸದಸ್ಯರು ಸೇರಿದಂತೆ ವಿರೋಧ ಪಕ್ಷಗಳ ಒಟ್ಟು 146 ಸಂಸತ್ ಸದಸ್ಯರನ್ನು ಅಮಾನತು ಮಾಡಲಾಗಿದೆ. ಆ ಮೂಲಕ ಮೋದಿ ನೇತೃತ್ವದ ಸರಕಾರ ವಿಪಕ್ಷಗಳನ್ನು ಹತ್ತಿಕ್ಕಲು ಮುಂದಾಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಅವರು ದೂರಿದರು.

ಆಡಳಿತ ಪಕ್ಷ ತಮ್ಮ ಅನುಕೂಲಕ್ಕೆ ತಕ್ಕಂತೆ ಹೇಳಿಕೆ ನೀಡಿ, ಸಂಸತ್ತಿನ ಉಭಯ ಸದನಗಳ ಒಳಗೆ  ಹಾಗೂ ಸದನದ ಹೊರಗೆ ನಮ್ಮ ಧ್ವನಿ ದಮನ ಮಾಡುವ ಪ್ರಯತ್ನ ಮಾಡಿದೆ. ಬಿಜೆಪಿಯ ವಾಜಪೇಯಿ, ಅಡ್ವಾಣಿ, ಸುಷ್ಮಾ ಸ್ವರಾಜ್‍ರಂತಹವರು ಸದನದ ಬಾವಿಗೆ ಇಳಿದು ಹೋರಾಟ ಮಾಡಿದ್ದಾರೆ. ಆದರೆ 75 ವರ್ಷಗಳ ಇತಿಹಾಸದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ವಿಪಕ್ಷಗಳ ಸದಸ್ಯರನ್ನು ಅಮಾನತು ಮಾಡಿರುವ ಕೀರ್ತಿ ಪ್ರಧಾನಿ ಮೋದಿ ಸರಕಾರಕ್ಕೆ ಸಲ್ಲುತ್ತದೆ ಎಂದು ಅವರು ಟೀಕಿಸಿದರು.

ಕುಮಾರಸ್ವಾಮಿ ವಿಧಾನಸಭೆಯಲ್ಲಿ ಸದಸ್ಯರಾಗಿದ್ದಾರೆ. ಅವರು ಆ ವಿಚಾರವನ್ನು ಸದನದಲ್ಲಿ ಎತ್ತಬೇಕಿತ್ತು. ವಿಧಾನಸಭೆಯಲ್ಲಿ ಭಯೋತ್ಪಾದಕರ ರೀತಿ ನುಗ್ಗಿ ಹೊಗೆ ಬಾಂಬ್ ದಾಳಿ ಮಾಡಿರಲಿಲ್ಲ. ಅವರು ಯಾವುದೇ ಆತಂಕ ಸೃಷ್ಟಿಸಿರಲಿಲ್ಲ. ಆದರೆ, ಸಂಸತ್ತಿನ ಒಳಗೆ ಬರಬೇಕಾದರೆ ಒಂದು ಕಾಗದವನ್ನು ಒಳಗೆ ಬಿಡುವುದಿಲ್ಲ. ಇಂತಹ ಸಂದರ್ಭದಲ್ಲಿ ಸ್ಫೋಟಕ ವಸ್ತುಗಳನ್ನು ಒಳಗೆ ತರಲಾಗಿದೆ ಎಂದರೆ ಅದು ಭದ್ರತಾ ಲೋಪ ಎಂದು ಅವರು ವಾಗ್ದಾಳಿ ನಡೆಸಿದರು.

ಭ್ರಮೆಯಲ್ಲಿರುವವರಿಗೆ ನಾವೇನು ಮಾಡಲು ಸಾಧ್ಯವಿಲ್ಲ

ಅವರು ಭ್ರಮಾಲೋಕದಲ್ಲಿ ತೇಲುತ್ತಿದ್ದಾರೆ. ಅಸ್ಥಿತ್ವ ಕಳೆದುಕೊಂಡವರು ಬೇರೆಯವರ ಆಶ್ರಯ ಪಡೆಯುವುದು ಸರ್ವೇ ಸಾಮಾನ್ಯ. ಅವರು ಆ ಪ್ರಕ್ರಿಯೆಯಲ್ಲಿದ್ದಾರೆ ಎಂದು ಟೀಕಿಸಿದ ಸುರೇಶ್, ಕುಮಾರಸ್ವಾಮಿ ಲೋಕಸಭಾ ಚುನಾವಣೆಯಲ್ಲಿ ಎಲ್ಲೇ ಸ್ಪರ್ಧೆ ಮಾಡಿದರು ನಾನು ಸ್ವಾಗತಿಸುತ್ತೇನೆ. ನಾನು ಅವರ ಅವರ ಪತ್ನಿ ವಿರುದ್ಧ ಸ್ಪರ್ಧಿಸಿದ್ದೆ. ನಾನು ರಾಜಕಾರಣಕ್ಕೆ ಬರಲು ಹಾಗೂ ಲೋಕಸಭೆಗೆ ಬರಲು ಕುಮಾರಸ್ವಾಮಿ ಅವರೇ ಕಾರಣ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News