ಉದ್ಯಮಿಗಳ ಕೈಯಲ್ಲಿ ಮಾಧ್ಯಮ ಕ್ಷೇತ್ರ ಸಿಲುಕಿಕೊಂಡಿದೆ: ಡಿಸಿಎಂ ಡಿ.ಕೆ.ಶಿವಕುಮಾರ್

Update: 2023-11-04 17:29 GMT

ಬೆಂಗಳೂರು:ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಉದ್ಯಮಿಗಳ ಕೈಯಲ್ಲಿ ಸಿಲುಕಿಕೊಂಡಿದ್ದು, ಮಾಧ್ಯಮಗಳನ್ನ ತಮ್ಮ ಸ್ವಂತ ಹಿತಾಸಕ್ತಿಗೆ ಬಳಕೆ ಮಾಡಿಕೊಳ್ಳುತ್ತಿರುವುದು ಹೆಚ್ಚಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿಷಾದ ವ್ಯಕ್ತಪಡಿಸಿದ್ದಾರೆ. 

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು "ಸಮಾಜಕ್ಕೆ ಕೃಷಿಕ, ಕಾರ್ಮಿಕ, ಶಿಕ್ಷಕ ಮತ್ತು ಸೈನಿಕ ಈ ನಾಲ್ಕುಮಂದಿ ಅತ್ಯಂತ ಅವಶ್ಯಕ. ಜತೆಗೆ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಮತ್ತು ಪತ್ರಿಕಾರಂಗ - ಇವು ಪ್ರಜಾಪ್ರಭುತ್ವದ ನಾಲ್ಕು ಸುಭದ್ರ ಕಂಬಗಳು ಗಟ್ಟಿಯಾಗಿ ಇರಬೇಕು ಎಂದು ಅಭಿಪ್ರಾಯಪಟ್ಟರು.

ಸಮಾಜವನ್ನು ತಿದ್ದುವಂತಹ ಶಕ್ತಿ ಮಾಧ್ಯಮರಂಗಕ್ಕೆ ಇದೆ. ಪ್ರಜಾಪ್ರಭುತ್ವದ ಮೂರು ಅಂಗಗಳು ತಪ್ಪು ಮಾಡಿದಾಗಲೂ ಎಚ್ಚರಿಸುವುದೇ ಮಾಧ್ಯಮ. ಆದರೆ ಇಂದು ಮಾಧ್ಯಮ ಕ್ಷೇತ್ರ ಉದ್ಯಮವಾಗಿ, ಖಾಸಗಿ ಆಸ್ತಿಯಾಗಿ ಪರಿವರ್ತನೆಗೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಾಧ್ಯಮ ಉದ್ಯಮವಾದ ತಕ್ಷಣ, ಅವರವರ ಹಿತಾಸಕ್ತಿಗೆ, ವಿಚಾರಗಳಿಗೆ, ರಕ್ಷಣೆಗೆ ಬಳಕೆಯಾಗುತ್ತಿದೆ. ನಾಯಿಕೊಡೆಗಳಂತೆ ಬೇಕಾದಷ್ಟು ಮಾಧ್ಯಮಗಳು ಬಂದು ಹೋಗಿವೆ. ನಾನು ಕೂಡ ಈ ಪ್ರಯೋಗ ಮಾಡಿ ಸುಮ್ಮನಾದೆ ಎಂದರು.

ಬಂಡವಾಳಶಾಹಿಗಳ ಕೈಗೆ ಸಿಲುಕಿ, ಕೆಲವು ಮಾಧ್ಯಮಗಳು ಒಂದು ಜಾತಿ, ಧರ್ಮ, ವರ್ಗ, ಸೀಮಿತ ವಿಚಾರ, ಆಚಾರ, ಅವರವರ ಹಿತಾಸಕ್ತಿಗೆ ಅನುಕೂಲವಾಗುವಂತೆ ವರ್ತಿಸುತ್ತಾ ಇವೆ. ಎಲ್ಲಾ ವರ್ಗ, ಸಮಾಜಕ್ಕೆ ತಲುಪುತ್ತದೆಯೋ ಅದು ನಿಜವಾದ ಮಾಧ್ಯಮ ಎಂದು ಹೇಳಿದರು.

ಕೆಲವು ಮಾಧ್ಯಮಗಳು, ಅದರಲ್ಲೂ ಒಂದಷ್ಟು ವರದಿಗಾರರು ಇಲ್ಲ, ಸಲ್ಲದ್ದನ್ನೇ ಕೇಳುತ್ತಾರೆ. ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ ಹೀಗಂದರು ಎಂದು ಅವರು ಹೇಳಿದ ಯಾವುದೋ ಒಂದು ಸಾಲನ್ನು ಹಿಡಿದುಕೊಂಡು ಬಂದು ಇನ್ನೊಬ್ಬರನ್ನು ಪ್ರಶ್ನೆ ಕೇಳುತ್ತಾರೆ. ಅವರು ಹೇಳಿದ್ದು ಇವರಿಗೆ, ಇವರು ಹೇಳಿದ್ದು ಅವರಿಗೆ ಕೇಳುವುದೇ ಪತ್ರಿಕೋದ್ಯಮ ಆಗಿದೆ. ಈ ರಾಜಕಾರಣಿಗಳೂ ಮಾಧ್ಯಮದಲ್ಲಿ ಬರಬೇಕು ಎನ್ನುವ ಚಟಕ್ಕೆ ಬಿದ್ದು ಮಾತನಾಡುತ್ತಾರೆ. ಅದೇ ಸುದ್ದಿ, ವಿವಾದವಾಗುತ್ತದೆ ಎಂದರು.

ಮಾಧ್ಯಮಗಳು ನನ್ನನ್ನು ಬಂಡೆ ಎಂದು ಕರೆಯಲು ಪ್ರಾರಂಭ ಮಾಡಿದವು. ಅದಕ್ಕೆ ನಾನು 'ಕಲ್ಲು ಪ್ರಕೃತಿ, ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ' ಎಂದು ಹೇಳಿದೆ. ನಾವು 20- 30 ವರ್ಷಗಳ ಕಾಲ ಉಳಿ ಪೆಟ್ಟು ತಿಂದು ರಾಜಕೀಯದಲ್ಲಿ ಬೆಳೆದು ಬಂದಿರುತ್ತೇವೆ. ಅದೇ ರೀತಿ ಮಾಧ್ಯಮಗಳು ಸಹ ಕಷ್ಟಪಟ್ಟೇ ಒಂದು ಹಂತಕ್ಕೆ ಬೆಳೆದು ಬಂದಿರುತ್ತವೆ, ಮಾಧ್ಯಮಗಳ ಒಳಗೆ ಒಳ್ಳೆಯ ಮುಖಚರ್ಯೆ ಇದ್ದರೆ ಬೆಳೆಯಲು ಸಾಧ್ಯ ಅಲ್ಲವೇ? ಎಂದು ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News