ಸಕಲೇಶಪುರ| ದಲಿತ ಮಹಿಳೆ ಗ್ರಾಪಂ ಅಧ್ಯಕ್ಷೆಯಾಗುವ ಕಾರಣಕ್ಕೆ ಸಭೆಗೆ ಸದಸ್ಯರ ಗೈರು: ಆರೋಪ

Update: 2024-02-09 09:54 GMT

ಸಕಲೇಶಪುರ: ಫೆ,8: ಗ್ರಾಮ ಪಂಚಾಯತ್ ಅಧ್ಯಕ್ಷರ ಆಯ್ಕೆ ಚುನಾವಣೆಗೆ ಬಹುತೇಕ ಸದಸ್ಯರು ಗೈರು ಹಾಜರಾದ ಕಾರಣ ಕೋರಂ ಕೊರತೆಯಿಂದ ಆಯ್ಕೆ ಪ್ರಕ್ರಿಯೆ ಮುಂದೂಡಲ್ಪಟ್ಟ ಘಟನೆ ತಾಲೂಕಿನ ಹೊಂಗಡಹಳ್ಳ ಗ್ರಾಮ ಪಂಚಾಯತ್ ನಲ್ಲಿ ನಡೆದಿದೆ. ದಲಿತ ಮಹಿಳೆ ಅಧ್ಯಕ್ಷೆಯಾಗುವ ಕಾರಣಕ್ಕೆ ಸದಸ್ಯರು ತನ್ನನ್ನು ಬೆಂಬಲಿಸಿಲ್ಲ ಎಂದು ಅಧ್ಯಕ್ಷ ಸ್ಥಾನದ ಅಭ್ಯರ್ಥಿ ವನಜಾಕ್ಷಿ ಕಣ್ಣೀರು ಹಾಕಿದ ಪ್ರಸಂಗವೂ ನಡೆದಿದೆ.

ಆರು ಸದಸ್ಯ ಬಲದ ಹೊಂಗಡಹಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಅದರಂತೆ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿಗೆ ಸೇರಿದ ಸದಸ್ಯೆ ವನಜಾಕ್ಷಿ ನಾಮಪತ್ರ ಸಲ್ಲಿಸಿದ್ದರು. ಗುರುವಾರ ಚುನಾವಣೆ ನಿಗದಿಯಾಗಿತ್ತು. ಆರು ಸದ್ಯಸರ ಪೈಕಿ ಕೋರಂಗೆ ಮೂವರು ಸದಸ್ಯರ ಉಪಸ್ಥಿತಿ ಅಗತ್ಯವಿತ್ತು. ಆದರೆ ಸಭೆಗೆ ವನಜಾಕ್ಷಿ ಸೇರಿ ಇಬ್ಬರು ಸದಸ್ಯರೂ ಮಾತ್ರ ಹಾಜರಾಗಿದ್ದರು. ಸದಸ್ಯರ ಹಾಜರಾತಿಗಾಗಿ ಅರ್ಧ ಗಂಟೆಗಳ ಕಾಲ ಹೆಚ್ಚುವರಿ ಸಮಯ ನೀಡಲಾಯಿತು. ಈ ಅವಧಿಯಲ್ಲೂ ಉಳಿದ ನಾಲ್ವರು ಸದಸ್ಯರು ಹಾಜರಾಗದ ಕಾರಣ ಸಭೆಯನ್ನು ಸೋಮವಾರ(ಫೆ.12)ಕ್ಕೆ ಮುಂದೂಡಲಾಗಿದೆ.

ಈ ನಡುವೆ ಮೀಸಲಾತಿ ಪ್ರಕಾರ ಅಧ್ಯಕ್ಷ ಸ್ಥಾನಕ್ಕೆ ವನಜಾಕ್ಷಿ ಅರ್ಹ ಏಕೈಕ ಅಭ್ಯರ್ಥಿಯಾಗಿರುವ ಕಾರಣ ಸೋಮವಾರದ ಸಭೆಯಲ್ಲಿ ಹೊಂಗಡಹಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ವನಜಾಕ್ಷಿ ಅಧಿಕೃತವಾಗಿ ಘೋಷಣೆಯಾಗಲಿದ್ದಾರೆ ಎಂದು ತಿಳಿದುಬಂದಿದೆ.

ಕೋರಂ ಕೊರತೆ:

ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿ ಮಾಧ್ಯಮದವರ ಜೊತೆ ಮಾತನಾಡಿದ ಚುನಾವಣಾ ಅಧಿಕಾರಿ ಆದಿತ್ಯ, ಅಧ್ಯಕ್ಷ ಸ್ಥಾನದ ಚುನಾವಣೆಗೆ ಸದಸ್ಯೆ ವನಜಾಕ್ಷಿ ಒಬ್ಬರೇ ನಾಮಪತ್ರ ಸಲ್ಲಿಸಿದರು. ಆರು ಜನ ಸದ್ಯಸರಲ್ಲಿ ಕೋರಂಗಾಗಿ ಮೂವರು ಸದಸ್ಯರ ಅಗತ್ಯವಿತ್ತು. ಆದರೆ ಇಬ್ಬರು ಮಾತ್ರ ಹಾಜರಿದ್ದ ಕಾರಣ, ಅರ್ಧಗಂಟೆಗಳ ಕಾಲ ಹೆಚ್ಚುವರಿಯಾಗಿ ಸಮಯ ನೀಡಲಾಯಿತು. ಈ ಅವಧಿಯಲ್ಲೂ ಉಳಿದ ಸದಸ್ಯರು ಹಾಜರಾಗದ ಕಾರಣ ಸೋಮವಾರ ಮತ್ತೆ ಸಭೆ ನಡೆಯಲಿದ್ದು, ಈ ವೇಳೆ ಅಧ್ಯಕ್ಷರ ಆಯ್ಕೆಯನ್ನು ಘೋಷಣೆ ಮಾಡಲಾಗುವುದು. ಇದೇವೇಳೆ ಉಪಾಧ್ಯಕ್ಷ ಸ್ಥಾನಕ್ಕೂ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.

ದಲಿತೆಯಾಗಿರುವ ಕಾರಣಕ್ಕೆ ಅನ್ಯಾಯ

ಈ ಸಂದರ್ಭದಲ್ಲಿ ಮಾತನಾಡಿದ ನಿಯೋಜಿತ ಗ್ರಾಪಂ ಅಧ್ಯಕ್ಷೆ ವನಜಾಕ್ಷಿ, "ನಾನು ಗ್ರಾಪಂ ಅಧ್ಯಕ್ಷೆಯಾಗಿ ಗುರುವಾರ ಅಧಿಕೃತ ಘೋಷಣೆ ಆಗಬೇಕಾಗಿತ್ತು, ಇದಕ್ಕೆ ಅಡಚಣೆ ಆಗಿದ್ದು ನನ್ನ ಜೊತೆ ಸದಸ್ಯರಾಗಿರುವವರ ಅಸಹಕಾರ. ನಾನು ದಲಿತ ಮಹಿಳೆ ಆಗಿರುವ ಕಾರಣಕ್ಕೆ ಹೀಗೆ ಮಾಡುತ್ತಿದ್ದಾರೆ ಎಂದು ಕಣ್ಣೀರಿಟ್ಟರು.

ನಾನು ಅಧ್ಯಕ್ಷಳಾಗಿ ಆಯ್ಕೆಯಾಗುವುದನ್ನು ನೋಡಲಾಗದ, ನನ್ನನ್ನು ಅಭಿನಂದಿಸಲು ಮುಂದಾಗದಿರುವ ಅವರ ಮನಸ್ಥಿತಿಯೇ ಸಭೆಗೆ ಸದಸ್ಯರ ಗೈರು ಹಾಜರಾತಿಗೆ ಕಾರಣವಾಗಿರಬಹುದು. ಆದರೆ ನಾನು ಇಲ್ಲಿಯವರೆಗೆ ಅವರಿಗೆ ಸಂಪೂರ್ಣ ಸಹಕಾರ ನೀಡಿದ್ದೇನೆ ಎಂದರು.

ಈ ವೇಳೆ ಗ್ರಾಪಂ ಸದಸ್ಯೆ ಸುಜಾತಾ, ಮಹಿಳಾ ಕಾಂಗ್ರೆಸ್ ಸದಸ್ಯೆ ಲಕ್ಷ್ಮೀ, ಕಿರಣ್, ಕೃಷ್ಣೇಗೌಡ, ಮಂಜು, ವಿಜಯ್, ಕಾಂಗ್ರೆಸ್ ಮುಖಂಡ ಬಾಚಳ್ಳಿ ಪ್ರತಾಪ್ ಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News