ಬೀದಿನಾಯಿಗಳಿಗೆ ಮೈಕ್ರೋಚಿಪ್‌ ಅಳವಡಿಕೆ‌ ವಿಚಾರ | ಟೆಂಡರ್ ರದ್ದು ಕೋರಿ ಅರ್ಜಿ : ರಾಜ್ಯ ಸರ್ಕಾರಕ್ಕೆ ನೋಟಿಸ್

Update: 2024-05-09 17:16 GMT

ಬೆಂಗಳೂರು : ಬೀದಿನಾಯಿಗಳಿಗೆ ಮೈಕ್ರೋಚಿಪ್ ಅಳವಡಿಸುವ ಸಲುವಾಗಿ ಸೂಕ್ತ ಕ್ರಮ ಪಾಲಿಸದೇ ಬಿಬಿಎಂಪಿ ಕರೆದಿದ್ದ ಟೆಂಡರ್ ಪ್ರಕ್ರಿಯೆ ರದ್ದು ಕೋರಿ ಸಲ್ಲಿಕೆಯಾಗಿದ್ದ ಪಿಐಎಲ್ ಗೆ ಕುರಿತಂತೆ ರಾಜ್ಯ ಸರ್ಕಾರ, ಪಶು ಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕರಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಹೆಬ್ಬಾಳ ನಿವಾಸಿ ಪ್ರೀಯದರ್ಶಿನಿ ಎಸ್.ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ಸುನೀಲ್ ದತ್ತ್ ಯಾದವ್ ಹಾಗೂ ವೆಂಕಟೇಶ್ ನಾಯ್ಕ.ಟಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲರು, ಬಿಬಿಎಂಪಿಯೂ ಅಗತ್ಯ ಮುನ್ನೆಚರಿಕೆ ಕ್ರಮಗಳನ್ನು ವಹಿಸದೆ ಬೀದಿನಾಯಿಗಳ ಆರೋಗ್ಯ ಹಾಗೂ ಜೀವದೊಂದಿಗೂ ಚೆಲ್ಲಾಟವಾಡುತ್ತಿದೆ. ಈ ಹಿನ್ನೆಲೆ ಟೆಂಡರ್ ಪ್ರಕ್ರಿಯೆ ರದ್ದುಗೊಳಿಸಬೇಕು. ಹಲವೆಡೆ ನಾಯಿಗಳಿಗೆ ಶಸ್ತ್ರ ಚಿಕಿತ್ಸೆ ನಡೆಸಿ ಚಿಪ್ ಅಳವಡಿಸಲಾಗುತ್ತಿದ್ದು, ಇದಕ್ಕೆ ತಡೆ ನೀಡಬೇಕು ಎಂದು ಮನವಿ ಮಾಡಿದರು.

ಈ ವಾದ ದಾಖಲಿಸಿಕೊಂಡ ಪೀಠ ಪ್ರಕರಣ ಸಂಬಂಧ ರಾಜ್ಯ ಸರ್ಕಾರ, ಬಿಬಿಎಂಪಿ ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಜೂನ್ ಮೊದಲ ವಾರಕ್ಕೆ ಮುಂದೂಡಿದೆ.

ನಗರದಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆಗೊಳಪಡಿಸಿದ ಬೀದಿ ನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಕೆಗೆ ಬಿಬಿಎಂಪಿ ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಟೆಂಡರ್ ಕರೆದಿದೆ. ಆದರೆ ಕಾನೂನು ವ್ಯಾಪ್ತಿಯಲ್ಲಿ ನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಕೆ ಮಾಡಲು ಅವಕಾಶವಿಲ್ಲ. ಅಲ್ಲದೆ ಈ ಬಗ್ಗೆ ಟೆಂಡರ್ ಕರೆಯುವ ಅಧಿಕಾರವನ್ನು ಕೂಡ ಬಿಬಿಎಂಪಿ ಹೊಂದಿಲ್ಲ. ಇದನ್ನು ಮೀರಿ ಬಿಬಿಎಂಪಿ ಕಾರ್ಯಚರಿಸುತ್ತಿದೆ. ಜತೆಗೆ ಲಸಿಕೆ ಮತ್ತು ಮೈಕ್ರೊಚಿಪಿಂಗ್ ಅಳವಡಿಸುವ ಯೋಜನೆಗೆ ಸರ್ಕಾರದಿಂದ ಅನುಮೋದನೆ ಪಡೆದಿಯೇ ಎನ್ನುವ ಬಗ್ಗೆ ತಿಳಿಸಿಲ್ಲ. ಈ ವಿಚಾರವಾಗಿ ಬಿಬಿಎಂಪಿ ತನ್ನ ಅಧಿಕಾರಿ ವ್ಯಾಪ್ತಿಯನ್ನು ಮೀರಿ ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News