‘ಬಿಎಸ್‍ವೈ ಪತ್ನಿ ಸಾವು ಹೇಗಾಯಿತು’ ಎಂದು ಶೋಭಾ ಕರಂದ್ಲಾಜೆ ಉತ್ತರಿಸಲಿ : ಸಚಿವ ಭೈರತಿ ಸುರೇಶ್
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪತ್ನಿಯ ಸಾವು ಹೇಗಾಯಿತು ಎಂಬುದನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಉತ್ತರಿಸಬೇಕು. ಏಕೆಂದರೆ, ಈ ಪ್ರಕರಣದಲ್ಲಿ ಶೋಭಾ ಅವರ ಬಗ್ಗೆ ನನಗೆ ಅನುಮಾನವಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ತಿರುಗೇಟು ನೀಡಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣದಲ್ಲಿ ನನ್ನನ್ನು ತನಿಖೆಗೆ ಒಳಪಡಿಸಬೇಕೆಂದು ಹೇಳಿಕೆ ನೀಡಿರುವ ಶೋಭಾ ಕರಂದ್ಲಾಜೆ ಅವರು, ಯಡಿಯೂರಪ್ಪ ಅವರ ಪತ್ನಿ ಸಾವು ಹೇಗಾಯಿತು ಎಂಬುದರ ಕುರಿತು ಉತ್ತರ ನೀಡಲಿ ಎಂದರು.
ಮುಡಾ ದಾಖಲೆಯನ್ನು ವಿಮಾನದಲ್ಲಿ ಕದ್ದೊಯ್ದು ಸುಟ್ಟು ಹಾಕಲಾಗಿದೆ. ಇದರಲ್ಲಿ ಭೈರತಿ ಸುರೇಶ್ ಅವರನ್ನು ಬಂಧಿಸಿ ತನಿಖೆಗೆ ಒಳಪಡಿಸಬೇಕೆಂದು ಶೋಭಾ ಕರಂದ್ಲಾಜೆ ಅವರು ಈ.ಡಿ.ಗೆ ಆಗ್ರಹಿಸಿದ್ದಾರೆ. ಮುಡಾ ಕಚೇರಿಯಲ್ಲಿ ಸಿಸಿಟಿವಿ ಇರುತ್ತದೆ. ಮುಡಾ ಯಾವುದೇ ಕಡತ ನಾನು ತಂದಿಲ್ಲ. ಕೇಂದ್ರ ಸಚಿವೆಯಾಗಿ ಗಾಳಿಯಲ್ಲಿ ಗುಂಡುಹಾರಿಸುವುದನ್ನು ಬಿಡಲಿ ಎಂದು ಭೈರತಿ ಸುರೇಶ್ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪತ್ನಿ ಸಾವಿನ ತನಿಖೆ ಆಗಿ ಶೋಭಾರನ್ನು ಬಂಧಿಸಬೇಕು. ಬಿ.ಎಸ್.ವೈ. ಪತ್ನಿಯ ಸಾವಿನ ವಿಚಾರದಲ್ಲಿ ಶೋಭಾ ಕರಂದ್ಲಾಜೆ ಅವರ ಬಗ್ಗೆ ಅನುಮಾನವಿದೆ ಎಂದು ಭೈರತಿ ಸುರೇಶ್ ಹೇಳಿದರು.
ಶೋಭಾ ಕರಂದ್ಲಾಜೆ ಅವರು ಸುಳ್ಳು ಆರೋಪ ಮಾಡುವ ಬದಲು ಧರ್ಮಸ್ಥಳ, ಚಾಮುಂಡಿ ದೇವಿಯ ಸನ್ನಿಧಾನಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಭೈರತಿ ಸುರೇಶ್ ಸವಾಲು ಹಾಕಿದ್ದಾರೆ.