‘ಅಂತರ್ಜಲ ಮರುಪೂರಣ’ಕ್ಕೆ ಹೊಸ ನೀತಿ ಜಾರಿಗೆ ತರಲು ಚಿಂತನೆ : ಸಚಿವ ಭೋಸರಾಜು

Update: 2024-06-19 13:05 GMT

ಬೆಂಗಳೂರು: ‘ದಿನೇ ದಿನೇ ಕುಸಿಯುತ್ತಿರುವ ಅಂತರ್ಜಲ ಮಟ್ಟವನ್ನು ವೃದ್ದಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಅಂತರ್ಜಲ ಮರುಪೂರಣಕ್ಕೆ ಇಂಬು ನೀಡಲು ಹೊಸ ನೀತಿಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ’ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎನ್.ಎಸ್.ಭೋಸರಾಜು ತಿಳಿಸಿದ್ದಾರೆ.

ಬುಧವಾರ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ಆಯೋಜಿಸಲಾಗಿದ್ದ ನೀರಿನ ಭದ್ರತೆಗಾಗಿ ಸುಸ್ಥಿರ ಅಂತರ್ಜಲ ನಿರ್ವಹಣೆ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ದಶಕಗಳಿಂದ ನಾವು ನಮ್ಮ ಕೈಗಾರಿಕೆಗಳೂ, ಕೃಷಿ ಮತ್ತು ದೈನಂದಿನ ಬಳಕೆಗೆ ಹೆಚ್ಚಾಗಿ ಅಂತರ್ಜಲದ ಮೇಲೆ ಅವಲಂಬಿತರಾಗಿದ್ದೇವೆ.

ಆದರೆ, ನಗರೀಕರಣ ಹಾಗೂ ಅರಣ್ಯನಾಶದಿಂದ ಅಂತರ್ಜಲದ ಲಭ್ಯತೆ ದಿನೇ ದಿನೇ ಕುಸಿಯುತ್ತಿದೆ. ಅಂತರ್ಜಲದ ಮೇಲಿನ ಶೋಷಣೆ ಹೆಚ್ಚಾಗುತ್ತಿದ್ದು, ಅದನ್ನ ಮರುಪೂರಣಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಕಡಿಮೆಯಾಗುತ್ತಿವೆ. ಹೆಚ್ಚುತ್ತಿರುವ ನಗರೀಕರಣದಿಂದ ನೈಸರ್ಗಿಕವಾಗಿ ಆಗುತ್ತಿದ್ದ ಮರುಪೂರಣವೂ ಕಡಿಮೆಯಾಗುತ್ತಾ ಸಾಗಿದೆ. ಈ ಸ್ಥಿತಿಯನ್ನು ಸರಿಪಡಿಸಲು ಕಾರ್ಯ ಪ್ರವೃತ್ತರಾಗಬೇಕಿದೆ. ಇಲ್ಲದಿದ್ದಲ್ಲಿ ನಮ್ಮ ಮುಂದಿನ ಪೀಳಿಗೆ ಇದರ ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಬಾರಿಯ ಬರ ನಮ್ಮೆಲ್ಲರಲ್ಲಿ ನೀರಿನ ಮಹತ್ವದ ಅರಿವು ಮೂಡಿಸಿದೆ. ಅಂತರ್ಜಲದ ಮೇಲಿನ ಶೋಷಣೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಅಂತರ್ಜಲದ ಸದ್ಬಳಕೆ, ಮಳೆ ನೀರು ಕೊಯ್ಲು ಪದ್ದತಿಯ ಅಳವಡಿಕೆ ಮತ್ತು ಅಂತರ್ಜಲ ಮರುಪೂರಣಕ್ಕೆ ಒತ್ತು ನೀಡಬೇಕಾಗಿದೆ. ಎಲ್ಲರೂ ಒಗ್ಗೂಡುವ ಮೂಲಕ ಸುಸ್ಥಿರ ಪದ್ದತಿಗಳನ್ನು ಅಳವಡಿಸಿಕೊಳ್ಳಲು ಮುಂದಾಗಬೇಕಾಗಿದೆ.

ಆ ಹಿನ್ನಲೆಯಲ್ಲಿ ನಮ್ಮ ಅಂತರ್ಜಲ ನಿರ್ದೇಶನಾಲಯದ ಅಡಿಯಲ್ಲಿ ಅಂತರ್ಜಲ ಮರುಪೂರಣಕ್ಕೆ ಇಂಬು ನೀಡುವಂತಹ ಹೊಸ ನೀತಿಯನ್ನು ಹೊರತರುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ. ರಾಜ್ಯದ ರೈತರ ಹಾಗೂ ಜನರ ಹಿತಾಸಕ್ತಿಗೆ ಬದ್ಧವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಇದಕ್ಕೆ ಬದ್ಧವಾಗಿದೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಸಮ್ಮೇಳನಗಳ ಮೂಲಕ ಈ ಕ್ಷೇತ್ರದಲ್ಲಿ ಆಗಿರುವಂತಹ ಹೊಸ ಆವಿಷ್ಕಾರಗಳ ಬಗ್ಗೆ ಜ್ಞಾನಾರ್ಜನೆ ಬೆಳೆಸಿಕೊಳ್ಳಬೇಕು. ಹಾಗೆಯೇ ಅವುಗಳ ಅನುಷ್ಠಾನಕ್ಕೆ ಸಂಬಂಧಪಟ್ಟ ಇಲಾಖೆಯ ಜೊತೆಗೆ ಕೈಜೋಡಿಸಬೇಕು ಎಂದು ಭೋಸರಾಜು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತರು ಭೂ ವಿಜ್ಞಾನಗಳ ಸಚಿವಾಲಯದ ನಿವೃತ್ತ ಕಾರ್ಯದರ್ಶಿ ಡಾ. ಶೈಲೇಶ್ ನಾಯಕ್, ಕೆಎಸ್‍ಟಿಎ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ.ಎ.ಎಂ.ರಮೇಶ್, ಶಿಕ್ಷಣ ತಜ್ಞ ಮತ್ತು ಪ್ರಯೋಗ ಸಂಸ್ಥೆಯ ಸಂಸ್ಥಾಪಕ ಡಾ.ಎಚ್.ಎಸ್.ನಾಗರಾಜ, ಹಿರಿಯ ವೈಜ್ಞಾನಿಕ ಅಧಿಕಾರಿ ಆನಂದ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News