ಕಲ್ಯಾಣ ಕರ್ನಾಟಕದ ಏಮ್ಸ್‌ ನಿರೀಕ್ಷೆಗೆ ಕೇಂದ್ರದಿಂದ ತಣ್ಣೀರು, ಇದು ಕೇವಲ ಮಿತ್ರಪಕ್ಷಗಳ ಮನವೊಲಿಸುವ ಬಜೆಟ್‌ : ಸಚಿವ ಭೋಸರಾಜು

Update: 2024-07-23 15:26 IST
ಕಲ್ಯಾಣ ಕರ್ನಾಟಕದ ಏಮ್ಸ್‌ ನಿರೀಕ್ಷೆಗೆ ಕೇಂದ್ರದಿಂದ ತಣ್ಣೀರು, ಇದು ಕೇವಲ ಮಿತ್ರಪಕ್ಷಗಳ ಮನವೊಲಿಸುವ ಬಜೆಟ್‌ : ಸಚಿವ ಭೋಸರಾಜು
  • whatsapp icon

ಬೆಂಗಳೂರು: ಮೋದಿ ಸರಕಾರದ ಬಜೆಟ್‌ ರಾಜ್ಯದ ಅದರಲ್ಲೂ ಕಲ್ಯಾಣ ಕರ್ನಾಟಕದ ನಿರೀಕ್ಷೆಗಳಿಗೆ ತಣ್ಣೀರು ಎರಚಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌.ಎಸ್‌ ಭೋಸರಾಜು ಪ್ರತಿಕ್ರಿಯಿಸಿದ್ದಾರೆ.

ಕೇವಲ ತಮ್ಮ ಮಿತ್ರ ಪಕ್ಷಗಳ ಹಿತಾಸಕ್ತಿಯನ್ನ ಕಾಪಾಡಿಕೊಂಡಿರುವ ಬಜೆಟ್‌ ಇದಾಗಿದ್ದು, ರಾಜ್ಯ ನಿರೀಕ್ಷಿಸಿದ್ದ ನೀರಾವರಿ ಯೋಜನೆಗಳ ಬಗ್ಗೆಯೂ ಯಾವುದೇ ಪ್ರಸ್ತಾಪ ಮಾಡದೇ ಇರುವ ಮೂಲಕ ಮತ್ತೊಮ್ಮೆ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ. ಕಲ್ಯಾಣ ಕರ್ನಾಟಕದ ಪ್ರಮುಖ ಜಿಲ್ಲೆಯಾದ ರಾಯಚೂರಿನಲ್ಲಿ ಏಮ್ಸ್‌ ಸ್ಥಾಪಿಸುವಂತೆ ಕಳೆದ 700ಕ್ಕೂ ಹೆಚ್ಚು ದಿನಗಳಿಂದ ರಾಯಚೂರಿನಲ್ಲಿ ಧರಣಿ ಸತ್ಯಾಗ್ರಹ ಮಾಡಲಾಗುತ್ತಿದೆ. ಸ್ವತಃ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ತಾವೇ ಹಲವಾರು ಬಾರಿ ಈ ಬಗ್ಗೆ ಮನವಿ ಪತ್ರವನ್ನ ಸಲ್ಲಿಸಿದ್ದಾರೆ. ಅಲ್ಲದೇ, ಹಲವಾರು ಬಾರಿ ಆ ಭಾಗದ ಜನಪ್ರತಿನಿಧಿಗಳು ತಮ್ಮ ಮನವಿಯನ್ನು ಕೇಂದ್ರ ಸಚಿವರಿಗೆ ಸಲ್ಲಿಸಿದ್ದಾರೆ. ಆದರೂ ಯಾವುದೇ ಕರುಣೆ ತೋರಿಸದೇ ರಾಜ್ಯಕ್ಕೆ ಅದರಲ್ಲೂ ಕಲ್ಯಾಣ ಕರ್ನಾಟಕದ ನಿರೀಕ್ಷೆಗೆ ತಣ್ಣೀರು ಎರಚುವ ಕಾರ್ಯವನ್ನು ಕೇಂದ್ರ ವಿತ್ತ ಸಚಿವರು ಮಾಡಿದ್ದಾರೆ ಎಂದು ಹೇಳಿದ್ದಾರೆ.

ಕೇಂದ್ರ ಬಜೆಟ್‌ ಮೇಲೆ ಜನಸಾಮಾನ್ಯರು ಬಹಳಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಹಿಂದುಳಿದ ವರ್ಗಗಳಿಗೆ, ರೈತರ ಅಭ್ಯುದಯಕ್ಕೆ, ಮಧ್ಯಮ ವರ್ಗದ ನಿರೀಕ್ಷೆಗಳಿಗೆ ಇಂಬು ನೀಡಿದೇ ಇರುವಂತಹ ಬಜೆಟನ್ನು ಮಂಡಿಸಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಬಜೆಟ್‌ ಬಡ ಜನ ವಿರೋಧಿಯಾಗಿದೆ  : ರಾಜ್ಯ ಹಾಗೂ ಕೇಂದ್ರ ಸರಕಾರದ ಯೋಜನೆಯಡಿಯಲ್ಲಿ ಬಡ ಕುಟುಂಬಗಳಿಗೆ ಕಟ್ಟಿಕೊಡುವ ಮನೆ, ವಸತಿ ಸಂಕೀರ್ಣಕ್ಕೆ ಜಿಎಸ್‌ಟಿ ವಿನಾಯಿತಿ ನೀಡಬೇಕು ಎಂಬ ಮನವಿಗೆ ಬಜೆಟ್ ನಲ್ಲಿ ಸ್ಪಂದಿಸಿಲ್ಲ. ಬಿಜೆಪಿಗೆ ಬಡವರ ಪರ ಇರುವ ಕಾಳಜಿಗೆ ಇದು ಸಾಕ್ಷಿ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಬಡ ಜನರ ವಿರೋಧಿಯಾಗಿದೆ ಎಂದು ಸಚಿವ ಜಮೀರ್ ಅಹಮದ್ ಖಾನ್ ಟೀಕಿಸಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News