ಮುಂಗಾರು ಬೆಳೆ ವೈಫಲ್ಯ : 1,791 ಕೋಟಿ ರೂ ಪರಿಹಾರಕ್ಕೆ ಸಚಿವ ಚಲುವರಾಯಸ್ವಾಮಿ ಸೂಚನೆ

Update: 2024-06-07 15:13 GMT

ಬೆಂಗಳೂರು : ಕಳೆದ ವಾರ್ಷಿಕ ಸಾಲಿನಲ್ಲಿ ಬರದಿಂದಾಗಿ ಉಂಟಾದ ಬೆಳೆ ಹಾನಿಗೆ ರಾಜ್ಯದಲ್ಲಿ ಮುಂಗಾರು ಹಂಗಾಮಿಗೆ 1,791ಕೋಟಿ ರೂ.ಬೆಳೆ ವಿಮೆ ಲೆಕ್ಕಾಚಾರ ಮಾಡಿದ್ದು, ಬಹುತೇಕ ಇತ್ಯರ್ಥ ಪಡಿಸಲಾಗಿದೆ. ಜತೆಗೆ, ಹಿಂಗಾರು ಬೆಳೆ ವಿಮೆ ಪರಿಹಾರ ಹಣ ತಲುಪಿಸಲು ವಿಮಾ ಕಂಪೆನಿಗಳೊಂದಿಗೆ ಸಮನ್ವಯ ಮಾಡಿ ಎಂದು ಕೃಷಿ ಸಚಿವ.ಎನ್.ಚಲುವರಾಯಸ್ವಾಮಿ ಸೂಚನೆ ನೀಡಿದ್ದಾರೆ.

ಶುಕ್ರವಾರ ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಕೃಷಿ, ಜಲಾನಯನ ಇಲಾಖೆಗಳು, ಕರ್ನಾಟಕ ರಾಜ್ಯ ಬೀಜ ನಿಗಮ ಕೃಷಿಕ ಸಮಾಜದ ಅಧಿಕಾರಿಗಳ ಸಭೆ ನಡೆಸಿದ ಅವರು, ಕಳೆದ ಸಾಲಿನ ವಿಮೆ ಇತ್ಯರ್ಥದ ಜೊತೆಗೆ ಈ ಮುಂಗಾರಿಗೂ ಬೆಳೆ ವಿಮೆ ನೊಂದಣಿ ಹಾಗೂ ರೈತ ಜಾಗೃತಿಗೆ ಆದ್ಯತೆ ನೀಡಿ ಎಂದು ನಿರ್ದೇಶನ ನೀಡಿದರು.

2023-24ರ ಮುಂಗಾರಿನಲ್ಲಿ 19.14 ಲಕ್ಷ ರೈತರು 15.10 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆ ವಿಮೆ ನೊಂದಾಯಿಸಿದ್ದರು. ನಿಯಮಾನುಸಾರ ಪರಿಶೀಲಿಸಿ ಅಂತಿಮವಾಗಿ ಬಾಕಿ ಇರುವ 130 ಕೋಟಿ ರೂ ಗಳನ್ನು ಶೀಘ್ರ ವಿತರಣೆ ಮಾಡಿ ಎಂದೂ ಅವರು ಉಲ್ಲೇಖಿಸಿದರು.

2023-24ನೆ ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ 5.88 ಲಕ್ಷ ರೈತರು 5.43 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಬೆಳೆ ವಿಮೆ ನೊಂದಾಯಿಸಿದ್ದರು.ಈವರಗೆ ಪ್ರಿವೆಂಟೆಡ್ ಸೋಯಿಂಗ್, ಸ್ಥಳೀಯ ಪ್ರಕೃತಿ ವಿಕೋಪ ಮತ್ತು ಮಿಡ್ ಸೀಜನ್ ಅಡ್ವರ್ಸಿಟಿ ಅಡಿ 16,053 ರೈತರಿಗೆ 7.93 ರೂ ಕೋಟಿ ಪರಿಹಾರ ಇತ್ಯರ್ಥ ಪಡಿಸಲಾಗಿದೆ. ಉಳಿದ ರೈತರಿಗೆ ವಿಮೆ ಹಣ ತಲುಪಿಸಿ ಎಂದು ನಿರ್ದೇಶಿಸಿದರು.

ರಾಜ್ಯಾದ್ಯಂತ ಪೂರ್ವ ಮುಂಗಾರು ಉತ್ತಮವಾಗಿದ್ದು, ಮುಂಗಾರು ಕೂಡ ಆರಂಭವಾಗಿದೆ .ಬಿತ್ತನೆ ಬೀಜ ,ರಸಗೊಬ್ಬರ ಬೇಡಿಕೆ ಆಧಾರದಲ್ಲಿ ಪೂರೈಕೆಯಾಗಿದ್ದು ಎಲ್ಲೂ ಕೊರತೆಯಾಗದಂತೆ ಎಚ್ಚರ ವಹಿಸಿ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಿ ಎಂದರು.

ಕೃಷಿ ಇಲಾಖೆ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಪ್ರಗತಿಯಲ್ಲಿರುವ ಹಾಗೂ ಪ್ರಾರಂಭವಾಗ ಬೇಕಿರುವ ವಿವಿಧ ಕಟ್ಟಡ ಕಾಮಗಾರಿಗಳನ್ನು ಅತ್ಯಂತ ತ್ವರಿತವಾಗಿ ಮುಕ್ತಾಯಗೊಳಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಕೃಷಿ ಇಲಾಖೆ ಆಯುಕ್ತ ಎ.ವೈ.ಪಾಟೀಲ್, ಜಲಾನಯನ ಇಲಾಖೆ ಆಯುಕ್ತ ಗಿರೀಶ್, ಇಲಾಖೆ ನಿರ್ದೇಶಕ ಡಾ.ಪುತ್ರ ಸೇರಿದಂತೆ ಪ್ರಮುಖರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News