ಜೂ.20ರೊಳಗೆ ʼಬಜೆಟ್ ಘೋಷಣೆʼ ಅನುಷ್ಠಾನಕ್ಕೆ ತರಲು ಸಚಿವ ಚಲುವರಾಯಸ್ವಾಮಿ ಸೂಚನೆ

Update: 2024-06-13 13:14 GMT

ಬೆಂಗಳೂರು : ರಾಜ್ಯ ಸರಕಾರ ಬಜೆಟ್‌ನಲ್ಲಿ ಘೋಷಿಸಿರುವ ಹೊಸ ಕೃಷಿ ಯೋಜನೆಗಳನ್ನು ಜೂ.20ರೊಳಗೆ ಅನುಷ್ಠಾನಕ್ಕೆ ತರುವಂತೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಗುರುವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ 2024-25ನೆ ಸಾಲಿನ ಆಯವ್ಯಯದಲ್ಲಿ ಘೋಷಣೆಯಾಗಿರುವ ಕೃಷಿ ಇಲಾಖೆಯ ಹೊಸ ಯೋಜನೆಗಳ ಅನುಷ್ಠಾನ ಕುರಿತು ಹಿರಿಯ ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಅವರು ಈ ನಿರ್ದೇಶನ ನೀಡಿದರು.

2024-25ರ ಆಯವ್ಯಯಲ್ಲಿ ಘೋಷಣೆಯಾದ 19 ಯೋಜನೆಗಳಲ್ಲಿ 12 ಯೋಜನೆಗಳಿಗೆ ಸರಕಾರಿ ಆದೇಶ ಹೊರಡಿಸಿದ್ದು, ಬಾಕಿ ಉಳಿದ 7 ಘೋಷಣೆಗಳಿಗೆ ವಾರದೊಳಗೆ ಸರಕಾರಿ ಆದೇಶ ಹೊರಡಿಸಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಎಂದು ಅವರು ಸೂಚಿಸಿದರು.

ಸರಕಾರದಲ್ಲಿ ಅನುದಾನಕ್ಕೆ ಕೊರತೆ ಇಲ್ಲ. ಕೃಷಿ ಕ್ಷೇತ್ರವನ್ನು ಸುಸ್ಥಿರ ಹಾಗೂ ಲಾಭದಾಯಕಗೊಳಿಸಲು ರೈತ ಸಮೃದ್ದಿ ಯೋಜನೆ ರೂಪಿಸಿದ್ದು, ಇದು ಸಮರ್ಪಕವಾಗಿ ತಲುಪಬೇಕು. ಇದು ರಾಜ್ಯ ಸರಕಾರದ ಆಶಯ. ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಒಳಗೊಂಡಂತೆ ವಿವಿಧ ಇಲಾಖೆಗಳ ಯೋಜನೆಗಳ ಸಂಯೋಜನೆ ಮೂಲಕ ಕಾರ್ಯಕ್ರಮ ಅನುಷ್ಠಾನ ಮಾಡಬೇಕು ಎಂದು ಚಲುವರಾಯಸ್ವಾಮಿ ಹೇಳಿದರು.

ಯೋಜನೆಗಳ ಅನುಷ್ಠಾನದ ಸಂದರ್ಭದಲ್ಲಿ ಉಂಟಾಗಬಹುದಾದ ಸಮಸ್ಯೆಗಳ ಬಗ್ಗೆ ಪೂರ್ವಾವಲೋಕನ ಆಗಬೇಕಿದೆ. ಈ ಬಗ್ಗೆ ಅಧಿಕಾರಿಗಳು ಚರ್ಚಿಸಿ ಅಭಿಪ್ರಾಯ ತಿಳಿಸಿ. ಪ್ರತ್ಯೇಕ ಆಹಾರ ಸಂಸ್ಕರಣೆ ಮತ್ತು ರಪ್ತು ಉತ್ತೇಜನ ಆಯುಕ್ತಾಲಯ ಸ್ಥಾಪನೆ ಮತ್ತು ಕೆಲ ಸಂಸ್ಥೆಗಳನ್ನು ಅದರ ವ್ಯಾಪ್ತಿಗೆ ತರುವ ಬಗ್ಗೆ ಸಾಧಕ ಬಾಧಕಗಳ ಬಗ್ಗೆ ಪರಿಶೀಲಿಸಿ ಪ್ರಸ್ತಾವನೆ ಸಿದ್ದಪಡಿಸುವಂತೆ ಅವರು ತಿಳಿಸಿದರು.

ಕರ್ನಾಟಕ ರೈತ ಸಮೃದ್ದಿ ಯೋಜನೆ, ಕೃಷಿ ಅಭಿವೃದ್ಧಿ ಪ್ರಾಧಿಕಾರ, ಕೃಷಿಭಾಗ್ಯ ಯೋಜನೆ, ಸಮುದಾಯದ ಬೀಜ ಬ್ಯಾಂಕ್ ಸ್ಥಾಪನೆ, ನಮ್ಮ ಮಿಲೆಟ್ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಆಗಬೇಕು, ವ್ಯವಸ್ಥಿತ ಚಾಲನೆ ನೀಡಬೇಕು ಎಂದು ಚಲುವರಾಯಸ್ವಾಮಿ ಸೂಚಿಸಿದರು.

ಬೆಂಗಳೂರಿನಲ್ಲಿ ಆರ್.ಕೆ.ಶಾಲಾ ಕೃಷಿ ಕ್ಷೇತ್ರವನ್ನು ತಾಂತ್ರಿಕತೆ ಪಸರಿಸುವ ಜ್ಞಾನ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಿ ರೈತರಿಗೆ ಕೀಟ/ರೋಗ ಮತ್ತು ಪೋಷಕಾಂಶಗಳ ನಿರ್ವಹಣೆ ಸಲಹೆ ನೀಡಲು ಇ-ಸ್ಯಾಪ್ ತಂತ್ರಾಂಶ ಸರಿಯಾಗಿ ಬಳಸಬೇಕು ಅದನ್ನು ಉಪಯೋಗಿಸುವವರಿಗೆ ಸೂಕ್ತ ತರಬೇತಿ ಒದಗಿಸಿ ಎಂದು ಅವರು ತಿಳಿಸಿದರು.

ಮಿಷಿನ್ ಲರ್ನಿಂಗ್ ನಂತಹ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಬೆಳೆ ಉತ್ಪಾದಕತೆ ಮುನ್ಸೂಚಿಸಲು ದತ್ತಾಂಶ ಅಭಿವೃದ್ಧಿ ಪಡಿಸಿ. ರೈತ ಉತ್ಪಾದಕತೆ ಸಂಸ್ಥೆಗಳಿಗೆ ಬೆಂಬಲ ನೀಡಲು ಅಗ್ರಿ ಆಕ್ಸಿಲೇಟರ್ ಪ್ಲ್ಯಾಟ್ ಫಾರ್ಮ್ ಮೂಲಕ ಕೃಷಿ ವಲಯದ ಸ್ಟಾರ್ಟಫ್ ಗಳನ್ನು ಉತ್ತೇಜಿಸುವ ಅನುಷ್ಠಾನ ಚುರುಕುಗೊಳಿಸಿ. ಇಲಾಖೆಯಲ್ಲಿ ಬಾಕಿ ಉಳಿದ ಕಡತಗಳನ್ನು ಪೂರ್ಣಗೊಳಿಸಿ ವಿಲೇವಾರಿಯಾಗುವಂತೆ ನಿಗಾವಹಿಸಿ ಎಂದು ಚಲುವರಾಯಸ್ವಾಮಿ ಹೇಳಿದರು.

ಬೀಜ-ರಸಗೊಬ್ಬರ ಕೊರತೆ ಇಲ್ಲ: ರಾಜ್ಯದ ಯಾವುದೇ ಜಿಲ್ಲೆಯಲ್ಲಿಯೂ ಬಿತ್ತನೆ ಬೀಜ, ರಸಗೊಬ್ಬರದ ಕೊರತೆ ಇಲ್ಲ. ಅಧಿಕಾರಿಗಳು ರೈತರಿಗೆ ಸೂಕ್ತ ಮಾಹಿತಿ ಮಾರ್ಗದರ್ಶನ ನೀಡಬೇಕು. ಅನಗತ್ಯ ಗೊಂದಲ ಸೃಷ್ಟಿ ಮಾಡಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಚಲುವರಾಯಸ್ವಾಮಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಡಾ.ಶಾಲಿನಿ ರಜನೀಶ್ ಅವರು ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಕುರಿತು ಹಲವು ಸಲಹೆಗಳನ್ನು ನೀಡಿದರು.

ಸಭೆಯಲ್ಲಿ ಕೃಷಿ ಇಲಾಖೆ ಕಾರ್ಯದರ್ಶಿ ಅನ್ಬುಕುಮಾರ್, ಕೃಷಿ ಇಲಾಖೆ ಆಯುಕ್ತ ವೈ.ಎಸ್.ಪಾಟೀಲ್, ಆಹಾರ ಸಂಸ್ಕರಣೆ ಹಾಗೂ ಕಟಾವು ತಂತ್ರಜ್ಞಾನ ವಿಶೇಷ ಕಾರ್ಯದರ್ಶಿ ರೋಹಿಣಿ ಸಿಂಧೂರಿ, ಜಲಾನಯನ ಅಭಿವೃದ್ಧಿ ಆಯುಕ್ತ ಡಾ.ಗಿರೀಶ್, ಕೃಷಿ ಇಲಾಖೆ ನಿರ್ದೇಶಕ ಡಾ.ಜಿ.ಟಿ.ಪುತ್ರ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News