ಮುಡಾ ಹಗರಣ ಸಾಬೀತಾದರೆ ಬೊಮ್ಮಾಯಿ ಜೈಲಿಗೆ ಹೋಗಬೇಕಾಗುತ್ತದೆ : ಸಚಿವ ಚಲುವರಾಯಸ್ವಾಮಿ

Update: 2024-08-05 14:18 GMT

ಮಂಡ್ಯ : ಮೈಸೂರಿನ ಮುಡಾ ಹಗರಣಕ್ಕೂ ಸಿದ್ದರಾಮಯ್ಯನವರಿಗೂ ಸಂಬಂಧವೇ ಇಲ್ಲ. ಹಗರಣ ನಡೆದಿರುವುದು ಸಾಬೀತಾದರೆ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅಂದಿನ ಮುಡಾ ಅಧ್ಯಕ್ಷ ಮೊದಲು ಜೈಲಿಗೆ ಹೋಗಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.

ನಗರದಲ್ಲಿ ನಾಳೆ(ಆ.6) ನಡೆಯಲಿರುವ ಕಾಂಗ್ರೆಸ್ ಜನಾಂದೋಲನ ಸಮಾವೇಶದ ಸ್ಥಳ ಪರಿಶೀಲನೆ ವೇಳೆ ಮಾಧ್ಯಮದವರ ಜತೆ ಮಾತನಾಡಿದ ಅವರು, "ಮೊದಲು ಕೇಸು ದಾಖಲಾಗಬೇಕಿರುವುದು ಬಸವರಾಜ ಬೊಮ್ಮಾಯಿ ಮತ್ತು ಅಂದಿನ ಮುಡಾ ಅಧ್ಯಕ್ಷರ ವಿರುದ್ಧ. ಕಾಂಗ್ರೆಸ್ ಸರಕಾರವನ್ನು ತೆಗೆಯಬೇಕೆನ್ನುವುದೇ ಬಿಜೆಪಿ-ಜೆಡಿಎಸ್ ನಾಯಕರ ಉದ್ದೇಶ. 135 ಸ್ಥಾನಗಳನ್ನು ಗೆದ್ದು ಜನಾದೇಶ ಪಡೆದಿರುವ ಕಾಂಗ್ರೆಸ್ ಸರಕಾರವನ್ನು ತೆಗೀತೀವಿ ಎಂದು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ. ಇವರನ್ನು ಕ್ರಿಮಿನಲ್ ಅಪರಾಧದ ಆರೋಪದಡಿ ಜೈಲಿಗೆ ಹಾಕಬಹುದು ಎಂದು ಅವರು ಪ್ರತಿಕ್ರಿಯಿಸಿದರು.

ಡಿ.ಕೆ.ಶಿವಕುಮಾರ್ ರಾಜಕಾರಣಕ್ಕೂ ಬರುವ ಮುಂಚೆಯೇ ಬ್ಯುಸಿನೆಸ್ ಮಾಡುತ್ತಿದ್ದರು. ಅವರು ಗಳಿಸಿರುವ ಆಸ್ತಿಗೆ ಲೀಗಲ್ ಡಾಕ್ಯುಮೆಂಟ್ ಇವೆ. ಆದರೆ, ಎಚ್.ಡಿ.ಕುಮಾರಸ್ವಾಮಿ ಯಾವುದೇ ಬ್ಯುಸಿನೆಸ್ ಇಲ್ಲದೇ ಏರ್‌ ಪೋರ್ಟ್‌  ರಸ್ತೆ, ನೆಲಮಂಗಲ ರಸ್ತೆ, ಕೆಂಗೇರಿ ರಸ್ತೆಗಳಲ್ಲಿ ಅಪಾರ ಆಸ್ತಿ ಮಾಡಿದ್ದಾರೆ. ಸಿನಿಮಾ ರಂಗದಿಂದ ಇಷ್ಟೊಂದು ಆಸ್ತಿ ಮಾಡಲು ಸಾಧ್ಯವೇ? ಎಂದು ಅವರು ಪ್ರಶ್ನಿಸಿದರು.

ಕೆಆರ್‌ಎಸ್ ಅಣೆಕಟ್ಟೆ ಭರ್ತಿಯಾಗಿರುವುದರಿಂದ ಜುಲೈ.10ರಿಂದ ನಾಲೆಗಳಿಗೆ ನಿರಂತರವಾಗಿ ನೀರು ಹರಿಸುತ್ತಿದ್ದೇವೆ. ಬೇಸಗೆ ಬೆಳೆಗೂ ನೀರು ಕೊಡಬೇಕು ಎಂಬ ಉದ್ದೇಶದಿಂದ ಕಟ್ಟುಪದ್ಧತಿಯಲ್ಲಿ ನೀರುಹರಿಸಲು ತೀರ್ಮಾನಿಸಲಾಗಿದೆ. ಆದರೂ ಭತ್ತದ ನಾಟಿ ಕಾರ್ಯಕ್ಕೆ ತೊಂದರೆಯಾಗದಂತೆ ನೀರು ಬಿಡುತ್ತೇವೆ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ಸ್ಷಷ್ಟಪಡಿಸಿದರು.

ಶಾಸಕ ಪಿ.ರವಿಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ರುದ್ರಪ್ಪ, ಶಿವನಂಜು, ಇತರೆ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News