ಡೆಂಗ್ಯೂ ಪರೀಕ್ಷೆ | ಖಾಸಗಿ ಆಸ್ಪತ್ರೆಗಳಿಗೂ ದರ ನಿಗದಿಗೆ ಸೂಚನೆ : ಸಚಿವ ದಿನೇಶ್ ಗುಂಡೂರಾವ್

Update: 2024-07-02 15:36 GMT

ಬೆಂಗಳೂರು : ಡೆಂಗ್ಯೂ ಪ್ರಕರಣಗಳ ಕುರಿತು ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಸರಕಾರಕ್ಕೆ ಮಾಹಿತಿ ನೀಡಬೇಕು. ಡೆಂಗ್ಯೂ ನಿಯಂತ್ರಣಕ್ಕೆ ಪಾಲಿಕೆ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಶಿಕ್ಷಕರನ್ನು ಬಳಸಿಕೊಳ್ಳಬೇಕು. ಅಲ್ಲದೇ, ಈ ಪ್ರಕರಣಗಳ ಪರೀಕ್ಷೆ(ಟೆಸ್ಟಿಂಗ್)ಗೆ ಖಾಸಗಿ ಆಸ್ಪತ್ರೆಗಳಿಗೂ ದರ ನಿಗದಿ ಮಾಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಡೆಂಗ್ಯೂ ನಿಯಂತ್ರಣ ಕುರಿತು ಬಿಬಿಎಂಪಿ, ಗ್ರಾಮೀಣಾಭಿವೃದ್ಧಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಬುಧವಾರವೇ ದರ ನಿಗದಿ ಕುರಿತು ಸುತ್ತೋಲೆ ಹೊರಡಿಸುವಂತೆ ತಿಳಿಸಿದರು.

ಅಲ್ಲದೇ, ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಡೆಂಗ್ಯೂ ಪಾಸಿಟಿವ್ ಪ್ರಕರಣಗಳ ಕುರಿತು ಸರಕಾರಕ್ಕೆ ಮಾಹಿತಿ ನೀಡುವಂತೆ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಕಳೆದ ಸಾಲಿಗೆ ಹೊಲೀಸಿದರೆ ಈ ಬಾರಿ ಡೆಂಗ್ಯೂ ಪ್ರಕರಣಗಳ ಟೆಸ್ಟಿಂಗ್ ನಲ್ಲಿ ಶೇ.42ರಷ್ಟು ಹೆಚ್ಚಳವಾಗಿದೆ. ಸಾಧ್ಯವಾದಷ್ಟು ಮುಂಚಿತವಾಗಿ ಡೆಂಗ್ಯೂ ಪಾಸಿಟಿವ್ ಪ್ರಕರಣಗಳನ್ನ ಪತ್ತೆ ಹಚ್ಚಿದಾಗ ಮಾತ್ರ ಸಾವುಗಳನ್ನ ತಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳು ಹೆಚ್ಚು ನಿಗಾ ವಹಿಸುವಂತೆ ದಿನೇಶ್ ಗುಂಡೂರಾವ್ ಹೇಳಿದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್ ಗುಂಡೂರಾವ್, ರಾಜ್ಯದಲ್ಲಿ ಒಟ್ಟು ಜನವರಿ ತಿಂಗಳಿನಿಂದ ಜೂನ್ ಅಂತ್ಯದ ವರೆಗೆ 6187 ಡೆಂಗ್ಯೂ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 6 ಜನರು ಸಾವಿಗೀಡಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಡೆಂಗ್ಯೂ ಮರಣ ಪ್ರಮಾಣ ಶೇ.0.09ರಷ್ಟಿದೆ. ಸಾವುಗಳನ್ನು ತಡೆಯುವ ನಿಟ್ಟಿನಲ್ಲಿ ಹೆಚ್ಚಿನ ನಿಗಾ ವಹಿಸಲು ಸೂಚಿಸಲಾಗಿದೆ. ಬೆಂಗಳೂರು, ಚಿಕ್ಕಮಗಳೂರು, ಮೈಸೂರು, ಹಾವೇರಿ, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿವೆ. ಎಲ್ಲ ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

ಬೆಂಗಳೂರಿನ ಪ್ರತಿಯೊಂದು ಮನೆಗಳಿಗೂ ಭೇಟಿ ನೀಡಿ ಜಾಗೃತಿ ಮೂಡಿಸಿ. ಡೆಂಗ್ಯೂ ನಿಯಂತ್ರಣ ವಿಚಾರದಲ್ಲಿ ಈಡಿಸ್ ಸೊಳ್ಳೆ ಹಾಗೂ ಲಾರ್ವಾ ಬಗ್ಗೆ ಜನರಿಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಲು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವಿಶೇಷವಾಗಿ ಬಿಬಿಎಂಪಿ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಪ್ರತಿ ಮನೆಗಳಿಗೆ ಭೇಟಿ ನೀಡಿ ಡೆಂಗ್ಯೂ ಬಗ್ಗೆ ಜನರಿಗೆ ತಿಳಿಹೇಳಬೇಕು ಎಂದು ಅವರು ತಿಳಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಪ್ರತಿಯೊಂದು ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸಬೇಕು. ಈಗಾಗಲೇ ವಿಜ್ಞಾನ ಶಿಕ್ಷಕರಿಗೆ ಡೆಂಗ್ಯೂ ಹಾಗೂ ಲಾರ್ವಾ ನಾಶದ ಬಗ್ಗೆ ತರಬೇತಿ ನೀಡಲಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಪ್ರತಿ ಶುಕ್ರವಾರ ಡೆಂಗ್ಯೂ ನಿಯಂತ್ರಣ ಅಭಿಯಾನ: ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಯ ಎಲ್ಲ ಅಧಿಕಾರಿಗಳು ಪ್ರತಿ ಶುಕ್ರವಾರ ಫೀಲ್ಡ್ ನಲ್ಲಿರಬೇಕು. ಲಾರ್ವಾ ನಾಶದ ಕುರಿತು ತೆಗೆದುಕೊಳ್ಳುತ್ತಿರುವ ಕ್ರಮಗಳ ಮೇಲ್ವಿಚಾರಣೆ ನಡೆಸಬೇಕು. ವಿಶೇಷವಾಗಿ ಕಟ್ಟಡ ನಿರ್ಮಾಣದಲ್ಲಿ ತೊಡಗಿರುವ ಸಂಸ್ಥೆಗಳ ಜೊತೆ ಬಿಬಿಎಂಪಿ ಆಯುಕ್ತರಿಗೆ ಸಭೆ ನಡೆಸಲು ಸೂಚಿಸಲಾಗಿದ್ದು, ನಿರ್ಮಾಣ ಕಾಮಗಾರಿಯಲ್ಲಿ ಸಂಗ್ರಹವಾಗಿರುವ ನೀರಿನಲ್ಲಿ ಲಾರ್ವಾಗಳನ್ನು ನಾಶಪಡಿಸುವ ನಿಟ್ಟಿನಲ್ಲಿ ಕ್ರಮಗಳನ್ನ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ಡೆಂಗ್ಯೂಯಿಂದ ಸಾವುಗಳ ಕುರಿತು ಮಾಧ್ಯಮಗಳು ಇಲಾಖೆಯ ಖಚಿತ ಮಾಹಿತಿಯನ್ನು ಪ್ರಕಟಿಸುವಂತೆ ಮನವಿ ಮಾಡಿರುವ ದಿನೇಶ್ ಗುಂಡೂರಾವ್, ವದಂತಿಗಳಿಗೆ ಕಿವಿಗೊಟ್ಟು ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದು. ಡೆಂಗ್ಯೂ ಹತೋಟಿಗೆ ಸಾರ್ವಜನಿಕರು ಹೆಚ್ಚು ಕೈಜೊಡಿಸುವಂತೆ ಇದೇ ವೇಳೆ ಮನವಿ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News