ʼಡೇ ಕೇರ್ ಕೀಮೊ ಥೆರಪಿʼ ಕೇಂದ್ರ ಶೀಘ್ರದಲ್ಲಿ ಪ್ರಾರಂಭ : ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರು : 2024-25ನೇ ಸಾಲಿನ ಆಯವ್ಯಯದಲ್ಲಿ ಘೋಷಣೆಯಾಗಿರುವಂತೆ ‘ಡೇ ಕೇರ್ ಕೀಮೊ ಥೆರಪಿ ಕೇಂದ್ರ’ಗಳನ್ನು ಆರೋಗ್ಯ ಇಲಾಖೆಯಡಿಯಲ್ಲಿ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಆರೋಗ್ಯ ಇಲಾಖೆ ಸಚಿವರ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಸೋಮವಾರ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್‍ನ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಗರ್ಭಕಂಠದ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ತಡೆಗಟ್ಟಲು ಪ್ರಸಕ್ತ ವರ್ಷದ ಬಜೆಟ್‍ನಂತೆ ಯಂತ್ರಗಳ ಖರೀದಿಗಾಗಿ ಅನುದಾನ ಅನುಮೋದನೆಗೊಂಡಿದ್ದು, ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ. ಸ್ತನ ಕ್ಯಾನ್ಸರ್ ತಪಾಸಣೆಗಾಗಿ 20 ಜಿಲ್ಲಾ ಆಸ್ಪತ್ರೆಗಳಿಗೆ ಡಿಜಿಟಲ್ ಮೊಮೋಗ್ರಾಮ್ ಯಂತ್ರಗಳನ್ನು ಟೆಂಡರ್ ಮುಖಾಂತರ ಖರೀದಿಸುವ ಪ್ರಕ್ರಿಯೆ ಕೊನೆಯ ಹಂತದಲ್ಲಿದೆ ಎಂದು ತಿಳಿಸಿದರು.
ಆರೋಗ್ಯ ಇಲಾಖೆಯಲ್ಲಿ ಎಸ್‍ಸಿಡಿ ವಿಭಾಗದಲ್ಲಿ ಮೂರು ಕ್ಯಾನ್ಸರ್ ಗಳಾದ ಬಾಯಿ, ಸ್ತನ ಹಾಗೂ ಗರ್ಭ ಕಂಠದ ಕ್ಯಾನ್ಸರ್ ಗಳ ತಪಾಸಣೆ ಪತ್ತೆ ಹಚ್ಚುವಿಕೆ ಹಾಗೂ ತೃತೀಯ ಹಂತದ ಚಿಕಿತ್ಸೆ ರಾನೆಯ ಕಾರ್ಯಕ್ರಮಗಳನ್ನು ಇಲಾಖೆಯ ಪೋರ್ಟಲ್‍ನಲ್ಲಿ ದಾಖಲೆ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ರಾಜ್ಯದಲ್ಲಿ 35-40ರ ವಯಸ್ಸಿನ ಮಹಿಳೆಯರಿಗೆ ಕ್ಯಾನ್ಸರ್ ತಪಾಸಣೆಯನ್ನು ಕಡ್ಡಾಯಗೊಳಿಸಿರುವುದಿಲ್ಲ. ಸ್ವಯಂ ದೈಹಿಕ ಪರೀಕ್ಷೆ ಮುಖಾಂತರ ಸ್ತನ ಕ್ಯಾನ್ಸರ್ ಪತ್ತೆ ಹಚ್ಚಲಾಗುತ್ತಿದೆ. ಬಾಯಿ ಪರೀಕ್ಷೆ ಮೂಲಕ ಬಾಯಿ ಕ್ಯಾನ್ಸರ್ ಪತ್ತೆ ಹಚ್ಚಲಾಗುತ್ತಿದೆ. ಸಂಶಯಾಸ್ಪದ ಪ್ರಕರಣಗಳ ಹೆಚ್ಚಿನ ತಪಾಸಣೆಗಾಗಿ ಅಂದರೆ ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಿಗೆ ಕಳುಹಿಸಲಾಗುವುದು. ಹೆಚ್ಚಿನ ಚಿಕಿತ್ಸೆಗಾಗಿ ತೃತೀಯ ಹಂತದ ಆಸ್ಪತ್ರೆಗಳಿಗೆ ಎಬಿ-ಎಆರ್ ಕೆ ಅಡಿಯಲ್ಲಿ ಚಿಕಿತ್ಸೆಗಾಗಿ ಕಳುಹಿಸಿಕೊಡಲಾಗುತ್ತಿದೆ ಎಂದು ಅವರು ತಿಳಿಸಿದರು.