ಒಂದು ದೇಶ ಒಂದು ಚುನಾವಣೆ | ರಾಜ್ಯ ವಿರೋಧಿ ಧೋರಣೆ : ಸಚಿವ ಎಚ್.ಸಿ.ಮಹದೇವಪ್ಪ

Update: 2024-09-20 12:53 GMT

ಬೆಂಗಳೂರು : ‘ಒಂದು ದೇಶ ಒಂದು ಚುನಾವಣೆ’ ಎನ್ನುವುದು ಒಂದು ಹಾಸ್ಯಾಸ್ಪದ ಸಂಗತಿಯಾಗಿದ್ದು, ಸ್ಪಷ್ಟತೆ ಇಲ್ಲದ ಮತ್ತು ರಾಜ್ಯ ವಿರೋಧಿ ಧೋರಣೆಯ ಬಗ್ಗೆ ವಿಪಕ್ಷಗಳು ಗಂಭೀರವಾಗಿ ಹೋರಾಟ ಮಾಡುವಂತಾಗಬೇಕು. ಜತೆಗೆ ರಾಜ್ಯದ ಹಣಕಾಸಿನ ಮೂಲಕ ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಎಲ್ಲರೂ ಒತ್ತಾಯಿಸಬೇಕು’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.

ಶುಕ್ರವಾರ ಪ್ರಕಟಣೆ ನೀಡಿರುವ ಅವರು, ‘ಆಡಳಿತಾತ್ಮಕವಾಗಿ ಎಲ್ಲ  ವಿಧದಲ್ಲೂ ವೈಫಲ್ಯ ಹೊಂದಿರುವ ಕೇಂದ್ರ ಸರಕಾರವು, ಹತ್ತು ವರ್ಷಗಳಿಂದಲೂ ಚುನಾವಣೆಗಳನ್ನು ಮಾಡುವುದರಲ್ಲಿ ಮತ್ತು ಕೋಮು ದ್ವೇಷದ ಮೂಲಕ ದೇಶದ ಆಂತರಿಕ ವ್ಯವಸ್ಥೆಯನ್ನು ಅಸ್ಥಿರಗೊಳಿಸುವುದರಲ್ಲಿ ತೋರಿಸುವ ಆಸಕ್ತಿಯನ್ನು, ಬೇರಾವ ಒಳ್ಳೆಯ ವಿಷಯದಲ್ಲಿ ತೋರಿಸಿದ್ದನ್ನು ನಾನು ಕಾಣಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಇದೀಗ ನಮ್ಮ ದೇಶದಲ್ಲಿರುವುದು ಒಕ್ಕೂಟ ವ್ಯವಸ್ಥೆ ಎಂಬ ಸಂಗತಿಯನ್ನು ಸಂಪೂರ್ಣವಾಗಿ ಮರೆತಿರುವ ಕೇಂದ್ರ ಸರಕಾರವು ಒಂದು ದೇಶ ಒಂದು ಚುನಾವಣೆಯನ್ನು ಮಾಡಲು ಹೊರಟಿರುವುದನ್ನು ನಾನು ಖಂಡಿಸುತ್ತೇನೆ. ನೆಲ ಜಲ ಮತ್ತು ಭಾಷೆಯ ವಿಷಯದಲ್ಲಿ ಸಾಕಷ್ಟು ವೈವಿಧ್ಯಮಯ ಸನ್ನಿವೇಶವನ್ನು ಹೊಂದಿರುವ ರಾಜ್ಯಗಳು ಭಾಷಾವಾರು ಪ್ರಾಂತ್ಯಗಳಾಗಿ ವಿಂಗಡನೆ ಆದ ಮೇಲೆ ಒಕ್ಕೂಟ ವ್ಯವಸ್ಥೆಯ ಭಾಗವಾಗಿ ತಮ್ಮದೇ ಆದ ಕೆಲವೊಂದು ಅಧಿಕಾರವನ್ನು ಪಡೆದಿವೆ.

ಹೀಗಿರುವ ರಾಜ್ಯಗಳಿಗೆ ಇರುವಂತಹ ಚುನಾವಣಾ ವ್ಯಾಪ್ತಿಯನ್ನು ಬದಲಿಸುವಂತಹ ಕೆಲಸ ಮಾಡುತ್ತಿರುವ ಕೇಂದ್ರ ಸರಕಾರ ರಾಜ್ಯದ ಅಸ್ತಿತ್ವವನ್ನು ವಿಪರೀತವಾಗಿ ಅವಮಾನಿಸುತ್ತಿದೆ. ಚುನಾವಣಾ ವ್ಯವಸ್ಥೆಯಲ್ಲಿ ಅಕ್ರಮಗಳು ನಿಲ್ಲಬೇಕಾದರೆ, ಆಯಾ ರಾಜ್ಯಗಳೇ ಚುನಾವಣಾ ವ್ಯವಸ್ಥೆ ನಡೆಯಲು ಹಣಕಾಸನ್ನು ಒದಗಿಸಬೇಕು. ಆಗ ಮಾತ್ರ ಚುನಾವಣಾ ವ್ಯವಸ್ಥೆಯಲ್ಲಿ ಅಗತ್ಯ ಬದಲಾವಣೆ ತರಬಹುದು ಎಂದು ಅವರು ಪ್ರತಿಪಾದಿಸಿದ್ದಾರೆ.

ಈ ದಿಸೆಯಲ್ಲಿ ಕೇಂದ್ರ ಸರಕಾರ ಯೋಚಿಸಬೇಕೇ ವಿನಃ, ಒಂದು ದೇಶ ಒಂದು ಚುನಾವಣೆ ಎಂಬುದಾಗಿ ಅಲ್ಲ. ಇನ್ನೂ ಮುಖ್ಯವಾಗಿ ನೋಡುವುದಾದರೆ ಕಳೆದ ಬಾರಿ ಸೋಲುವ ಭಯದಿಂದ ಲೋಕಸಭೆ ಚುನಾವಣೆಯನ್ನೇ ಏಳು ಹಂತದಲ್ಲಿ ನಡೆಸಿದ ಇವರು, ಜಮ್ಮು ಮತ್ತು ಕಾಶ್ಮೀರ ಚುನಾವಣೆಯನ್ನು ಒಟ್ಟಾಗಿ ನಡೆಸಿದರೆ ಎಲ್ಲಿ ಅದರ ಮೇಲಿನ ನಿಯಂತ್ರಣ ಕೈತಪ್ಪುವುದೋ ಎಂದು ಹೆದರಿ ಪ್ರತ್ಯೇಕವಾಗಿ ಈ ರಾಜ್ಯಗಳ ಚುನಾವಣೆ ನಡೆಸುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News