ಜುಲೈನಲ್ಲಿ ಸಕಲೇಶಪುರ, ಬಳ್ಳೆ ಶಿಬಿರದಲ್ಲಿ ಅರ್ಜುನ ಆನೆ ಸ್ಮಾರಕಕ್ಕೆ ಶಿಲಾನ್ಯಾಸ : ಸಚಿವ ಈಶ್ವರ್ ಖಂಡ್ರೆ

Update: 2024-06-20 15:33 GMT

ಸಫಾರಿ ಮಿನಿ ಬಸ್‌ಗಳಿಗೆ ಹಸಿರು ನಿಶಾನೆ/ ಅರ್ಜುನ ಆನೆ

ಬೆಂಗಳೂರು,: ಹಾಸನ ಜಿಲ್ಲೆ ಯಸಳೂರು ವಲಯದಲ್ಲಿ ಕಳೆದ ಡಿಸೆಂಬರ್ 4ರಂದು ಆನೆ ಸೆರೆ ಕಾರ್ಯಾಚರಣೆ ವೇಳೆ ವೀರಾವೇಶದಿಂದ ಹೋರಾಡಿ ಮೃತಪಟ್ಟ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆಯ ಸಮಾಧಿ ಸ್ಥಳದಲ್ಲಿ ಸ್ಮಾರಕ ನಿರ್ಮಾಣಕ್ಕೆ ಜುಲೈನಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದ ಮುಂಭಾಗದಲ್ಲಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಸಫಾರಿಗಾಗಿ ವಿಶೇಷ ವಿನ್ಯಾಸದೊಂದಿಗೆ ಸಿದ್ಧವಾಗಿರುವ 3 ಹೊಸ ಮಿನಿ ಬಸ್ ಗಳಿಗೆ ಹಸಿರು ನಿಶಾನೆ ತೋರಿದ ಬಳಿಕ ಅವರು ಮಾತನಾಡಿದರು.

ಹಾಸನ ಜಿಲ್ಲೆ ಯಸಳೂರು ಬಳಿ ಅರ್ಜುನ ಆನೆಯ ಸಮಾಧಿ ಸ್ಥಳದಲ್ಲಿ ಮತ್ತು ಅರ್ಜುನನ ಆವಾಸಸ್ಥಾನವಾಗಿದ್ದ, ನಾಗರಹೊಳೆಯ ಬಳ್ಳೆ ಆನೆ ಶಿಬಿರದಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗುವುದು. ಈ ಎರಡೂ ಸ್ಮಾರಕಗಳಲ್ಲಿ ಅರ್ಜುನ ಪ್ರತಿಕೃತಿಯನ್ನು ನಿರ್ಮಿಸಿ ಪ್ರತಿಷ್ಠಾಪಿಸಲಾಗುವುದು ಎಂದು ಅವರು ಹೇಳಿದರು.

ಜೊತೆಗೆ ಚಿನ್ನದ ಅಂಬಾರಿ ಹೊತ್ತ ಅರ್ಜುನನ ಚಿತ್ರಗಳು, ಅರ್ಜುನ ವಿವಿಧ ಆನೆ ಕಾರ್ಯಾಚರಣೆ, ಹುಲಿ ಮತ್ತು ಚಿರತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಚಿತ್ರಗಳನ್ನು ಹಾಕುವ ಮೂಲಕ ಜನರ ಮನದಲ್ಲಿ ಅರ್ಜುನನ ಸಾಹಸ, ಸೇವೆ, ಕೊಡುಗೆ ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಲಾಗುವುದು. ಇದೇ ಸಾಲಿನ ಡಿ.4ರೊಳಗೆ ಅಂದರೆ ಅರ್ಜುನನ ಪ್ರಥಮ ಪುಣ್ಯತಿಥಿಯ ದಿನದೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.

ಆನೆ ಶಿಬಿರಗಳಲ್ಲಿದ್ದ ಕೆಲವು ಸಾಕಾನೆಗಳು ಮೃತಪಟ್ಟಿರುವುದು ನೋವಿನ ಸಂಗತಿ. ಈ ಕುರಿತಂತೆ ತನಿಖೆ ಮಾಡಿ ವರದಿ ಸಲ್ಲಿಸಲು ಸೂಚಿಸಲಾಗಿದೆ. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅರಣ್ಯದೊಳಗೆ ಕಳ್ಳಬೇಟೆ ನಿಗ್ರಹ ಶಿಬಿರಗಳಲ್ಲಿ ಹಗಲಿರುಳು ದುಡಿಯುವ ಸಿಬ್ಬಂದಿಗೆ 2 ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡಲು ತೀರ್ಮಾನಿಸಲಾಗಿದ್ದು, ಕಡತವನ್ನು ಹಣಕಾಸು ಇಲಾಖೆಯ ಅನುಮೋದನೆಗೆ ಸಲ್ಲಿಸಲಾಗಿದೆ. ಶೀಘ್ರವೇ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಅವರು ತಿಳಿಸಿದರು.

ಸಫಾರಿ ಬಸ್ ವೈಶಿಷ್ಟ್ಯ: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಮೂರು ಸುಸಜ್ಜಿತ ಮಿನಿ ಬಸ್ ಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. 16,55,585 ರೂ.ಗಳಿಗೆ ಮಿನಿ ಬಸ್ ಛಾಸಿ ಖರೀದಿಸಲಾಗಿದ್ದು, ರಮೇಶ್ ಗೋವಿಂದನ್ ನೀಡಿರುವ 14,81,590 ರೂ. ಮತ್ತು ಕೊಯಮತ್ತೂರಿನ ಹರೀ ಶಾಂತಾರಾಮ್ ಅವರು ನೀಡಿರುವ 20 ಲಕ್ಷ ರೂ. ಸಿ.ಎಸ್.ಆರ್. ನೆರವಿನಿಂದ ಕವಚ ನಿರ್ಮಾಣ ಮಾಡಲಾಗಿದ್ದು, ಈ ಬಸ್ ಗಳು ಪ್ರವಾಸಿಗರಿಗೆ ಹೊಸ ಅನುಭವ ನೀಡುತ್ತವೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಶಾಸಕರಾದ ಎ.ಎಸ್.ಪೊನ್ನಣ್ಣ, ಜಿ.ಡಿ.ಹರೀಶ್ ಗೌಡ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಾದ ಬ್ರಿಜೇಶ್ ದೀಕ್ಷಿತ್, ಸುಭಾಷ್ ಮಾಲ್ಕಡೆ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News