ತಿಪ್ಪಗೊಂಡನಹಳ್ಳಿ ಜಲಾಶಯದ ನೀರು ಕೈಗಾರಿಕೆಗೆ ಬಳಕೆ | ಸಿಎಂಗೆ ಸಚಿವ ಈಶ್ವರ್ ಖಂಡ್ರೆ ಪತ್ರ

Update: 2024-09-12 11:48 GMT

ಬೆಂಗಳೂರು : ಕಲುಷಿತಗೊಂಡಿರುವ ಕಾರಣ ಬಳಕೆಯಾಗದೆ ಇರುವ ತಿಪ್ಪಗೊಂಡನಹಳ್ಳಿ ಜಲಾಶಯದ ನೀರನ್ನು ಶುದ್ಧೀಕರಿಸಿ ಕಟ್ಟಡ ನಿರ್ಮಾಣ, ಕೈಗಾರಿಕೆಗಳ ಬಳಕೆಗೆ ಪೂರೈಕೆ ಮಾಡಲು ಅನುವಾಗುವಂತೆ ಜಲ ಸಂಪನ್ಮೂಲ ಮತ್ತು ಸಣ್ಣ ನೀರಾವರಿ ಸಚಿವರ ಸಭೆ ಕರೆದು ಸಮಾಲೋಚಿಸಲು ಪರಿಸರ ಸಚಿವ ಈಶ್ವರ್ ಖಂಡ್ರೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.

ಪ್ರಸ್ತುತ ತ್ಯಾಜ್ಯ ನೀರು ಸೇರ್ಪಡೆಯಾಗಿ ಕಲುಷಿತವಾಗಿರುವ ತಿಪ್ಪಗೊಂಡನಹಳ್ಳಿ ಜಲಾಶಯ ಮತ್ತು ಬೆಂಗಳೂರಿನ ವಿವಿಧ ಕೆರೆಗಳ ಬಳಿ ಸರಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿ, ನೀರು ಶುದ್ಧೀಕರಿಸಿ ಕಟ್ಟಡ ನಿರ್ಮಾಣ ಮತ್ತು ಪೀಣ್ಯ ಕೈಗಾರಿಕಾ ಪ್ರದೇಶ ಸೇರಿದಂತೆ ವಿವಿಧ ಕೈಗಾರಿಕಾ ಪ್ರದೇಶದ ಕೈಗಾರಿಕೆಗಳಿಗೆ ನೀರು ಪೂರೈಕೆ ಮಾಡಿದಲ್ಲಿ ಅದರಿಂದ ಸರಕಾರಕ್ಕೂ ಆದಾಯ ಬರುತ್ತದೆ, ಜೊತೆಗೆ ಕುಡಿಯುವ ನೀರನ್ನು ಅನ್ಯ ಉದ್ದೇಶಕ್ಕೆ ಬಳಸುವುದೂ ತಗ್ಗುತ್ತದೆ ಎಂದು ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಬೆಂಗಳೂರಿನ ಬಹುಮಹಡಿ ಕಟ್ಟಡಗಳಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕಟ್ಟಡ ನಿರ್ಮಾಣಕ್ಕೆ ಮಾರಾಟ ಮಾಡುವ ಪರಿಸರ ಇಲಾಖೆಯ ಪ್ರಸ್ತಾವನೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದ ತರುವಾಯ ನೀತಿ ರೂಪಿಸಲಾಗಿದ್ದು, ಈ ನಿರ್ಧಾರಕ್ಕೆ ಉಪ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ರಿಯಲ್ ಎಸ್ಟೇಟ್ ಸಂಸ್ಥೆಗಳ ಸಭೆಯಲ್ಲಿ ಮೆಚ್ಚುಗೆಯೂ ವ್ಯಕ್ತವಾಗಿದೆ ಎಂದು ಈಶ್ವರ್ ಖಂಡ್ರೆ ಉಲ್ಲೇಖಿಸಿದ್ದಾರೆ.

ತ್ಯಾಜ್ಯ ನೀರು ಸಂಸ್ಕರಿಸಿ ಮಾರಾಟ ಮಾಡುತ್ತಿರುವುದರಿಂದ ಬಹುಮಹಡಿ ಕಟ್ಟಡಗಳಿಗೆ ಆದಾಯವೂ ಬರುತ್ತಿದೆ ಜೊತೆಗೆ ಕಟ್ಟಡ ನಿರ್ಮಾಣದಾರರಿಗೆ ನೀರೂ ಲಭ್ಯವಾಗುತ್ತಿದೆ. ತ್ಯಾಜ್ಯ ನೀರು ಕೆರೆ, ನದಿ ಸೇರುವುದೂ ತಪ್ಪುತ್ತದೆ ಜೊತೆಗೆ ಅಂತರ್ಜಲ ಮಟ್ಟ ಕಾಯ್ದುಕೊಳ್ಳಲೂ ಅನುಕೂಲವಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಕೃತಿ, ಪರಿಸರ ಉಳಿಸುವ ದೃಷ್ಟಿಯಿಂದ ತಿಪ್ಪಗೊಂಡನಹಳ್ಳಿ ಜಲಾಶಯ ಮತ್ತು ಇತರ ಕೆರೆಗಳ ನೀರನ್ನು ಶುದ್ಧೀಕರಿಸಿ ಕೈಗಾರಿಕೆ, ನಿರ್ಮಾಣ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲು ಪರಿಸರ, ಜಲ ಸಂಪನ್ಮೂಲ, ಸಣ್ಣ ನೀರಾವರಿ ಸಚಿವರ ಸಭೆ ಕರೆದು ಸಮಾಲೋಚಿಸಲು ಮುಖ್ಯಮಂತ್ರಿಯನ್ನು ಈಶ್ವರ್ ಖಂಡ್ರೆ ಕೋರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News