ಅಪೆಕ್ಸ್ ಬ್ಯಾಂಕ್‍ನಲ್ಲಿ ಹಗರಣ ಆಗಿದ್ದರೆ ತನಿಖೆ : ಸಚಿವ ಕೆ.ಎನ್.ರಾಜಣ್ಣ

Update: 2024-07-22 15:25 GMT

ಬೆಂಗಳೂರು : ಅಪೆಕ್ಸ್ ಬ್ಯಾಂಕ್ ರಾಜ್ಯ ಸರಕಾರದ ಅಧೀನದಲ್ಲಿಲ್ಲ. ಅದೊಂದು ಶೆಡ್ಯೂಲ್ಡ್ ಬ್ಯಾಂಕ್. ನಿರ್ದಿಷ್ಟವಾಗಿ ಈ ಬ್ಯಾಂಕ್‍ನಲ್ಲಿ ಯಾವುದಾದರೂ ಹಗರಣ ನಡೆದಿರುವ ಕುರಿತು ಮಾಹಿತಿ, ದಾಖಲೆ ನೀಡಿದರೆ ಸರಕಾರ ತನಿಖೆ ನಡೆಸಲಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ಸೋಮವಾರ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಆನಂದ್ ಕೆ.ಎಸ್ ಅವರು ಅಪೆಕ್ಸ್ ಬ್ಯಾಂಕಿನಿಂದ ಸಾಲ ಪಡೆದಿರುವ ಹಾಲಿ, ಮಾಜಿ ಸಚಿವರು, ಶಾಸಕರು, ಸಂಸದರ ವಿವರವಾದ ಮಾಹಿತಿ ನೀಡುವಂತೆ ಗಮನ ಸೆಳೆದ ಸೂಚನೆಗೆ ಅವರು ಉತ್ತರಿಸಿದರು.

ಆರ್‌ಬಿಐ ಸುತ್ತೋಲೆಯಂತೆ ಬ್ಯಾಂಕ್‍ಗಳಲ್ಲಿ ಸಾಲ ಪಡೆದಿರುವವರ ಮಾಹಿತಿಯನ್ನು ಗ್ರಾಹಕರ ಒಪ್ಪಿಗೆ ಇಲ್ಲದೆ ಬಹಿರಂಗ ಮಾಡುವಂತಿಲ್ಲ ಎಂದು ರಾಜಣ್ಣ ನೀಡಿದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಆನಂದ್, ಅಪೆಕ್ಸ್ ಬ್ಯಾಂಕ್‍ಗೆ ನಬಾರ್ಡ್‍ನಿಂದ ಎರಡು ಸಾವಿರ ಕೋಟಿ ರೂ.ನೆರವು ಬಂದಿದೆ. ಬಹುತೇಕ ಶಾಸಕರು ಸಕ್ಕರೆ ಕಾರ್ಖಾನೆ ಮಾಡಲು ಅಪೆಕ್ಸ್ ಬ್ಯಾಂಕ್‍ನಿಂದ ಸಾಲ ಪಡೆದಿದ್ದಾರೆ ಎಂದರು.

ಕೆಲವು ಸಮರ್ಪಕವಾದ ದಾಖಲೆಗಳನ್ನು ನೀಡದೆ ಸಾಲ ಪಡೆದಿದ್ದಾರೆ. ಇದರಲ್ಲಿ ಭ್ರಷ್ಟಾಚಾರ ಆಗಿದೆ. ಹೈಕೋರ್ಟ್ ಸಹ ಈ ಬಗ್ಗೆ ಪ್ರಶ್ನೆ ಎತ್ತಿದೆ. ಡಿಸಿಸಿ ಬ್ಯಾಂಕ್‍ಗಳಲ್ಲಿ ನಲ್ಲಿ ರೈತರಿಗೆ, ಸಾಮಾನ್ಯ ಜನರಿಗೆ ಸಾಲ ಸಿಗುತ್ತಿಲ್ಲ. ಆದರೆ, ಉದ್ಯಮಿಗಳಿಗೆ ಮಾತ್ರ ಸಾಲ ನೀಡುತ್ತಿದ್ದಾರೆ. ಇಲ್ಲಿ ಸಾವಿರಾರು ಕೋಟಿ ರೂ. ಹಗರಣಗಳು ಆಗಿವೆ ಎಂದು ಆನಂದ್ ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ರಾಜಣ್ಣ, ಅಪೇಕ್ಸ್ ಬ್ಯಾಂಕ್ ನಲ್ಲಿ ಯಾವುದೇ ಹಗರಣ ನಡೆದಿದ್ದರೂ ತನಿಖೆ ಮಾಡಿಸುತ್ತೇವೆ.  ಒಂದು ವೇಳೆ ಅಂತಹ ಯಾವುದಾದರೂ ನಿರ್ದಿಷ್ಟ ಪ್ರಕರಣ ಗಮನಕ್ಕೆ ತಂದರೆ ತನಿಖೆ ಮಾಡಿಸುತ್ತೇವೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News