ಅರ್ಹ ಫಲಾನುಭವಿಗಳಿಗಾಗಿ ‘ಗ್ಯಾರಂಟಿ’ ಪರಿಷ್ಕರಣೆ ನಡೆಯುತ್ತಿದೆ : ಸಚಿವ ಕೆ.ಎಚ್.ಮುನಿಯಪ್ಪ

Update: 2024-08-14 13:57 GMT

ಹೊಸದಿಲ್ಲಿ : ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಪಡಿತರ ಚೀಟಿದಾರರಿಗೆ ಮತ್ತು ಗೃಹ ಜ್ಯೋತಿ ಬಳಸುವ ಅರ್ಹರಿಗೆ ಮಾತ್ರ ಸೌಲಭ್ಯಗಳನ್ನು ಕಲ್ಪಿಸಲು ಪರಿಷ್ಕರಣೆ ಮಾಡುತ್ತಿದ್ದೇವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.

ಹೊಸದಿಲ್ಲಿ ಪ್ರವಾಸದಲ್ಲಿರುವ ಅವರು ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ರಾಜ್ಯ ಸರಕಾರ ಯಾವುದೇ ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ. ಈಗಾಗಲೆ, ಅವುಗಳಿಗೆ ಅಗತ್ಯವಿರುವ ಹಣವನ್ನು ಮೀಸಲಿಟ್ಟಿದ್ದೇವೆ. ಗ್ಯಾರಂಟಿಗಳನ್ನು ಮುಂದುವರೆಸುವುದರ ಜೊತೆಗೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ 14 ಬಜೆಟ್ ಗಳನ್ನು ಮಂಡಿಸಿದ್ದು, ಅಭಿವೃದ್ಧಿ ಕಾರ್ಯಕ್ರಮಗಳ ಜೊತೆಗೆ ಗ್ಯಾರಂಟಿಗಳಿಗೂ ಹಣವನ್ನು ಮೀಸಲಿಟ್ಟಿದ್ದಾರೆ. ನಮ್ಮ ಐದು ಗ್ಯಾರಂಟಿ ಯೋಜನೆಗಳಿಂದ ಸುಮಾರು 4.5 ಕೋಟಿ ಜನರಿಗೆ ಸಹಕಾರಿಯಾಗುತ್ತಿದೆ ಎಂದು ಮುನಿಯಪ್ಪ ಹೇಳಿದ್ದಾರೆ.

ಎಪಿಎಲ್ ಪಡಿತರದಾರರಿಗೂ ನಾವು 15ರೂ. ದರದಲ್ಲಿ ಒಂದು ಕೆಜಿಯಂತೆ ಒಂದು ಕುಟುಂಬಕ್ಕೆ 10 ಕೆಜಿ ಅಕ್ಕಿಯನ್ನು ನೀಡುತ್ತೇವೆ. ಹಿಂದಿನ ಸರಕಾರದಲ್ಲಿ ಪಡಿತರ ಚೀಟಿಗಾಗಿ ಸಲ್ಲಿಕೆಯಾಗಿರುವ 2.95 ಲಕ್ಷ ಅರ್ಜಿಗಳು ವಿಲೇವಾರಿಗೆ ಬಾಕಿಯಿದ್ದವು. ಇವುಗಳನ್ನು ಪರಿಷ್ಕರಿಸಿದಾಗ 2.38 ಲಕ್ಷ ಅರ್ಜಿಗಳು ಬಿಪಿಎಲ್‍ಗೆ ಒಳಪಡುತ್ತಿದ್ದು, ಉಳಿದ 30-40 ಸಾವಿರ ಅರ್ಜಿಗಳು ಎಪಿಎಲ್‍ಗೆ ಒಳಪಡುತ್ತವೆ ಎಂದು ಅವರು ತಿಳಿಸಿದ್ದಾರೆ.

ಮುಡಾ ವಿಚಾರ ಬಿಜೆಪಿ ಆರೋಪದಲ್ಲಿ ಹುರುಳಿಲ್ಲ: ಮುಡಾ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮಾಡುತ್ತಿರುವ ಆರೋಪದಲ್ಲಿ ಯಾವುದೆ ಹುರುಳಿಲ್ಲ. ಈಗಾಗಲೇ ಈ ಪ್ರಕರಣದ ಕುರಿತು ತನಿಖೆ ನಡೆಸಲು ನ್ಯಾಯಾಂಗ ಆಯೋಗ ರಚನೆ ಮಾಡಿದ್ದೇವೆ. ಅಲ್ಲದೇ, ಬಿಜೆಪಿ ಸರಕಾರದ ಅವಧಿಯಲ್ಲಿ ನಿವೇಶನ ಹಂಚಿಕೆ ಮಾಡಿದ್ದು, ಇದರಲ್ಲಿ ಸಿದ್ದರಾಮಯ್ಯ ಪಾತ್ರ ಏನು ಇಲ್ಲ ಎಂದು ಮುನಿಯಪ್ಪ ಹೇಳಿದ್ದಾರೆ.

ಕ್ಷುಲ್ಲಕ ಕಾರಣ ಇಟ್ಟುಕೊಂಡು ಬೆಂಗಳೂರಿನಿಂದ ಮೈಸೂರುವರೆಗೆ ವಿರೋಧ ಪಕ್ಷಗಳು ಪಾದಯಾತ್ರೆ ಮಾಡಿವೆ. ಕೇಂದ್ರದಲ್ಲಿ ಸರಕಾರ ರಚಿಸಿ ಅಧಿಕಾರ ನಡೆಸಲು ಜನ ಅವರಿಗೆ ಅವಕಾಶ ಕೊಟ್ಟಿದ್ದಾರೆ. ಅದೇ ರೀತಿ, ರಾಜ್ಯದಲ್ಲಿ 136 ಸ್ಥಾನಗಳನ್ನು ಕೊಟ್ಟು ನಮಗೆ ಅಧಿಕಾರ ಕೊಟ್ಟಿದ್ದಾರೆ. ನೀವು ಅಲ್ಲಿ, ನಾವು ಇಲ್ಲಿ ಕೆಲಸ ಮಾಡಬೇಕೆ ಹೊರತು, ಕುತಂತ್ರದಿಂದ ರಾಜಕೀಯ ಮಾಡಬಾರದು ಎಂದು ಮುನಿಯಪ್ಪ ತಿಳಿಸಿದ್ದಾರೆ.

ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ ಸೇರಿದಂತೆ ನಮ್ಮ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ರಾಜ್ಯದ ಅಭಿವೃದ್ಧಿಗಾಗಿ ನಮ್ಮ ಸರಕಾರಕ್ಕೆ ಸಹಕಾರ ನೀಡಬೇಕು ಎಂದು ಅವರು ಕೋರಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News