ಶೀಘ್ರದಲ್ಲೇ ಅರ್ಜಿದಾರರಿಗೆ ಬಿಪಿಎಲ್ ಕಾರ್ಡ್ ವಿತರಣೆ : ಸಚಿವ ಕೆ.ಎಚ್.ಮುನಿಯಪ್ಪ

Update: 2024-07-15 13:39 GMT

ಬೆಂಗಳೂರು : ರಾಜ್ಯದಲ್ಲಿ ಸದ್ಯಕ್ಕೆ 1.73 ಲಕ್ಷ ಬಿಪಿಎಲ್ ಕಾರ್ಡ್ ಅರ್ಜಿಗಳ ವಿಲೇವಾರಿ ಬಾಕಿ ಇದ್ದು, ಶೀಘ್ರದಲ್ಲೇ ಈ ಅರ್ಜಿದಾರರಿಗೆ ಬಿಪಿಎಲ್ ಕಾರ್ಡ್ ಮಂಜೂರು ಮಾಡಿ ಪಡಿತರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಭರವಸೆ ನೀಡಿದ್ದಾರೆ.

ಸೋಮವಾರ ಇಲ್ಲಿನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಪ್ರತಾಪ್ ಸಿಂಹ ನಾಯಕ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಿಂದಿನ ಸರಕಾರದ ಅಂತ್ಯದಲ್ಲಿ 2.95 ಲಕ್ಷ ಬಿಪಿಎಲ್ ಕಾರ್ಡ್ ಅರ್ಜಿ ವಿಲೇವಾರಿ ಬಾಕಿ ಇತ್ತು. ಅದರಲ್ಲಿ ನಾವು ಪರಿಶೀಲಿಸಿದ್ದು, ಅರ್ಜಿ ಸಲ್ಲಿಸಿದವರಲ್ಲಿ 2,36,162 ಅರ್ಜಿಗಳು ಅರ್ಹವಿದ್ದು, ಬಾಕಿ 56,930 ಅರ್ಜಿದಾರರು ಬಿಪಿಎಲ್ ಕೆಳಗೆ ಬರುವುದಿಲ್ಲ. ಅರ್ಹರಲ್ಲಿ 62 ಸಾವಿರ ಕಾರ್ಡ್‍ಗಳನ್ನು ಈಗಾಗಲೇ ಪಟ್ಟಿಗೆ ತಂದು ಪಡಿತರ ಕೊಡಲಾಗುತ್ತಿದೆ. ಬಾಕಿ ಕಾರ್ಡ್‍ಗಳ ಪರಿಶೀಲಿಸುತ್ತಿದ್ದು, ಬಾಕಿ ಇರುವ 1.73ಲಕ್ಷ ಕಾರ್ಡ್‍ದಾರರಿಗೂ ಆದಷ್ಟು ಬೇಗ ಪಡಿತರ ವಿತರಿಸಲಾಗುತ್ತದೆ ಎಂದರು.

ಆರೋಗ್ಯ ಸಂಬಂಧಿತ ಚಿಕಿತ್ಸೆಗೆ ಪಡಿತರ ಕಾರ್ಡ್ ವಿತರಿಸಲು ಕಾಲಮಿತಿ ಇಲ್ಲ. ವಾರದಲ್ಲಿ ಕಾರ್ಡ್ ವಿತರಿಸಲಾಗುತ್ತದೆ. ಈವರೆಗೂ ಎಪಿಎಲ್ ಮತ್ತು ಬಿಪಿಎಲ್ ಸೇರಿ 4 ಕೋಟಿಗೂ ಮೀರಿ ಅಧಿಕ ಕಾರ್ಡ್‍ಗಳ ವಿತರಣೆ ಮಾಡಿದ್ದೇವೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾರೇ ಅರ್ಜಿ ಸಲ್ಲಿಸುತ್ತಿದ್ದಂತೆ ಕೂಡಲೇ ಕಾರ್ಡ್ ಕೊಡಲು ಕ್ರಮ ವಹಿಸಲಾಗುತ್ತದೆ ಎಂದು ಅವರು ಹೇಳಿದರು.

ಕಲಾಪದಲ್ಲಿ ಬಿಜೆಪಿ ಸದಸ್ಯ ಎನ್.ರವಿಕುಮಾರ್, ಅಕ್ಷರ ದಾಸೋಹಕ್ಕೆ 29.30 ರೂ.ಗೆ ಕೆ.ಜಿ. ಅಕ್ಕಿ ಶಿಕ್ಷಣ ಇಲಾಖೆ ಖರೀದಿಸುತ್ತಿದೆ. ಮುನಿಯಪ್ಪ ಅವರು 34.60ರೂ.ಗೆ ಖರೀದಿಸುತ್ತಿದ್ದಾರೆ. 5.5 ರೂ. ವ್ಯತ್ಯಾಸವಾಗಿದೆ. ಈ ಹಣದ ವ್ಯತ್ಯಾಸ ಯಾಕೆ, ಎಲ್ಲಿ ಹೋಗುತ್ತಿದೆ, ಹೆಚ್ಚುವರಿ ಹಣ ಯಾಕೆ ಕೊಡಲಾಗುತ್ತಿದೆ ಎಂದು ಪ್ರಶ್ನಿಸಿದರು.

ಅಕ್ಷರ ದಾಸೋಹಕ್ಕೆ ರಾಜ್ಯದ ಟೆಂಡರ್ ಅನ್ನಭಾಗ್ಯಕ್ಕೆ ಕೇಂದ್ರೀಯ ಭಂಡಾರದಿಂದ ಅಕ್ಕಿ ಖರೀದಿ ಮಾಡುತ್ತಿರುವ ಹಿನ್ನೆಲೆ ಖರೀದಿ ದರದಲ್ಲಿ ವ್ಯತ್ಯಾಸವಿದೆ ಎಂದು ಕೆ.ಎಚ್.ಮುನಿಯಪ್ಪ ಸ್ಪಷ್ಟಪಡಿಸಿದರು.

ಕೇಂದ್ರಕ್ಕೆ ಸೇರಿದ ಎರಡು ಸಂಸ್ಥೆಗಳಿಂದಲೇ ಅಕ್ಕಿ ಖರೀದಿ ಮಾಡಲಾಗುತ್ತಿದೆ. ಪಾರದರ್ಶಕವಾಗಿ ಖರೀದಿಸಿದೆ. ಅನ್ನಭಾಗ್ಯಕ್ಕೆ ನಮಗೆ ಹೆಚ್ಚುವರಿ ಅಕ್ಕಿಯನ್ನು ಕೇಂದ್ರ ಸರಕಾರ ಕೊಡಲಿಲ್ಲ. ನಂತರ ನಾವು ಕೇಂದ್ರ ಸ್ವಾಮ್ಯದ ಸಂಸ್ಥೆಗಳ ಮೂಲಕವೇ ಖರೀದಿಸುತ್ತಿದ್ದೇವೆ. ಎ.ಗ್ರೇಡ್ ರೈಸ್ ಖರೀದಿಸಿ ವಿತರಣೆ ಮಾಡಲಾಗುತ್ತಿದೆ. ಎನ್‍ಸಿಸಿಎಫ್, ನಾಫೆಡ್, ಕೇಂದ್ರೀಯ ಭಂಡಾರ್ ಸಂಸ್ಥೆಗಳಿಂದಲೇ ನಾವು ಅಕ್ಕಿ ಖರೀದಿಸುತ್ತಿದ್ದೇವೆ. ನಾವು ಟೆಂಡರ್ ಕೂಡ ಕರೆಯದೇ ಕೇಂದ್ರದ ಸಂಸ್ಥೆಗಳಿಂದಲೇ ಖರೀದಿ ಮಾಡಿ ವಿತರಿಸುತ್ತಿದ್ದೇವೆ ಎಂದು ಕೆ.ಎಚ್.ಮುನಿಯಪ್ಪ ತಿಳಿಸಿದರು.

ಇದಕ್ಕೆ ಮರು ಪ್ರಶ್ನಿಸಿದ ಎನ್.ರವಿಕುಮಾರ್, ಅನ್ನಭಾಗ್ಯಕ್ಕೆ ಹೆಚ್ಚಿನ ದರ ನೀಡಿ ಎ.ಗ್ರೇಡ್ ಖರೀದಿಸಿದರೆ ಮಕ್ಕಳಿಗೆ ಯಾವ ಗುಣಮಟ್ಟದ ಅಕ್ಕಿ ಖರೀದಿಸಲಾಗುತ್ತಿದೆ? ಎಂದು ಪ್ರಶ್ನಿಸಿದರು. ಇದಕ್ಕೆ ಸ್ಪಷ್ಟೀಕರಣ ನೀಡಿದ ಶಿಕ್ಷಣ ಸಚಿವ ಮಧುಬಂಗಾರಪ್ಪ, ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಅಕ್ಕಿ ಕೊಡಲಾಗುತ್ತಿದೆ. ನಾವು ಟೆಂಡರ್ ಕರೆದು ಕೊಡುತ್ತಿದ್ದೇವೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News