‘ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ’ ಎಂದ ವಿದ್ಯಾರ್ಥಿ : ಸಚಿವ ಮಧು ಬಂಗಾರಪ್ಪ ಗರಂ

Update: 2024-11-20 14:25 GMT

ಬೆಂಗಳೂರು: ಉಚಿತ ನೀಟ್, ಜೆಇಇ, ಸಿಇಟಿ ಆನ್‍ಲೈನ್ ಕೋಚಿಂಗ್ ತರಗತಿಗಳ ತರಬೇತಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಸಂವಾದ ನಡೆಸುವ ವೇಳೆ ‘ವಿದ್ಯಾ ಮಂತ್ರಿಗೆ ಕನ್ನಡ ಬರಲ್ಲ’ ಎಂದು ನೇರವಾಗಿಯೇ ವಿದ್ಯಾರ್ಥಿಯೊಬ್ಬ ಹೇಳಿದ ಕಾರಣ ಸಚಿವ ಮಧುಬಂಗಾರಪ್ಪ ಗರಂ ಆಗಿರುವ ಪ್ರಸಂಗ ಬುಧವಾರ ನಡೆದಿದೆ.

ಈ ವೇಳೆಯಲ್ಲಿ ವಿದ್ಯಾರ್ಥಿಯ ಮಾತನ್ನು ಕೇಳಿಸಿಕೊಂಡ ಮಧು ಬಂಗಾರಪ್ಪ, ‘ಯಾರೋ ಅದು ಹೇಳಿದ್ದು, ಏನಂತ ಹೇಳಿದ್ದು? ನಾನೇನು ಉರ್ದುನಲ್ಲಿ ಮಾತಾಡಿದ್ನಾ? ಕನ್ನಡದಲ್ಲೇ ಮಾತನಾಡಿದ್ದು’ ಎಂದು ಗರಂ ಆದರು.

ಅನಂತರ ಪಕ್ಕದಲ್ಲಿ ಕುಳಿತಿದ್ದ ಪದವಿ ಪೂರ್ವ ಕಾಲೇಜು ನಿರ್ದೇಶಕಿ ಸಿಂಧೂ ಬಿ.ರೂಪೇಶ್ ಮತ್ತು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಅವರಿಗೆ, ಆ ವಿದ್ಯಾರ್ಥಿ ಯಾರು ಎಂದು ತಿಳಿದುಕೊಂಡು ಕ್ರಮ ಕೈಗೊಳ್ಳುವಂತೆ ಮಧು ಬಂಗಾರಪ್ಪ ಸೂಚಿಸಿದರು. 

ಬಿಜೆಪಿ ವ್ಯಂಗ್ಯ: ‘ತನಗೆ ಕನ್ನಡ ಸರಿಯಾಗಿ ಬರುವುದಿಲ್ಲ ಎಂದು ಮಧು ಬಂಗಾರಪ್ಪ ಅವರೇ ಹಿಂದೊಮ್ಮೆ ಹೇಳಿದ್ದರು. ಅದನ್ನೇ ವಿದ್ಯಾರ್ಥಿಯೊಬ್ಬ ನೆನೆಪಿಸಿದ ಕೂಡಲೇ ಆ ವಿದ್ಯಾರ್ಥಿಯನ್ನು ವಿರುದ್ಧ ಕ್ರಮ ಕೈಗೊಳ್ಳಲು ಆದೇಶಿಸಿರುವುದು ನಿಜಕ್ಕೂ ಮೂರ್ಖತನ. ಕಾಂಗ್ರೆಸಿಗರ ಈ ರೀತಿ ಸರ್ವಾಧಿಕಾರಿ ಧೋರಣೆ ಪ್ರಜಾಪ್ರಭುತ್ವಕ್ಕೆ ಮಾರಕ’ ಎಂದು ಬಿಜೆಪಿ ಎಕ್ಸ್‌ ನಲ್ಲಿ ಪೋಸ್ಟ್ ಹಾಕುವ ಮೂಲಕ ಲೇವಡಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News